ಬೆಂಗಳೂರು: ರಾಜ್ಯ ಸರ್ಕಾರದ ಮುಸ್ಲಿಂ ಓಲೈಕೆಗೆ ಇಲ್ಲಿದೆ ನೋಡಿ `ಸಾಕ್ಷ್ಯಚಿತ್ರ'! ಜಾತಿ, ಧರ್ಮ, ಪಂಥ, ತಾರತಮ್ಯ ಇಲ್ಲ ಎಂಬ ಆಶಯದೊಂದಿಗೆ ಕೆಂಗಲ್ ಹನುಮಂತಯ್ಯ ಕಟ್ಟಿದ ಶಕ್ತಿಸೌಧಕ್ಕೆ ಸಿಎಂ ಸಿದ್ದರಾಮಯ್ಯ ಓಲೈಕೆ ರಾಜಕಾರಣದ ಮಸಿ ಬಳಿದಿದ್ದಾರೆ.
ರಾಜ್ಯದಿಂದ ಹಜ್ ಯಾತ್ರೆಗೆ ತೆರಳುವ ಪ್ರವಾಸಿಗರನ್ನು ಲಾಟರಿ ಮೂಲಕ ಆಯ್ಕೆ ಮಾಡುವುದಕ್ಕಾಗಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಗುರುವಾರ ಸಾಯಂಕಾಲ ಆಯೋಜಿಸಿದ್ದ ಕಾರ್ಯಕ್ರಮ ಸಂದರ್ಭದಲ್ಲಿ ಸಭಾಂಗಣದ ಪಕ್ಕದ ಹುಲ್ಲುಹಾಸಿನ ಮೇಲೆಯೆ ನಮಾಜ್ ಮಾಡಲಾಗಿದೆ. ಆ ಮೂಲಕ ಸರ್ಕಾರಿ ಕಾರ್ಯಕ್ರಮ ಅಧಿಕೃತವಾಗಿ ಧಾರ್ಮಿಕ ಕಾರ್ಯಕ್ರಮವಾಗಿ ಪರಿಣಮಿಸಿದ್ದು, ಭದ್ರತೆಗೆ ನಿಯೋಜಿಸಿದ್ದ ಪೊಲೀಸ್ ಸಿಬ್ಬಂದಿಯಾಗಲಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಡಿಪಿಎಆರ್) ಅಧಿಕಾರಿಗಳಾಗಲಿ, ಸಿಎಂ ಸಿದ್ದರಾಮಯ್ಯ ಅವರಾಗಲಿ, ವಾರ್ತಾ ಸಚಿವ ರೋಷನ್ ಬೇಗ್, ಸರ್ಕಾರಿ ಕಾರ್ಯಕ್ರಮಕ್ಕೆ ಬಂದ ಮುಸ್ಲಿಂ ರಾಜಕೀಯ ಮುಖಂಡರಾಗಲಿ ತುಟಿಪಿಟಿಕ್ ಎಂದಿಲ್ಲ.
ಪೂರ್ವಯೋಜಿತವೇ?: ಕಾರ್ಯಕ್ರಮವನ್ನು ಮಧ್ಯಾಹ್ನ 4 ಗಂಟೆಗೆ ಆಯೋಜಿಸಲಾಗಿತ್ತು. ಆದರೆ ಆರಂಭವಾಗುವುದಕ್ಕೆ ವಿಳಂಬವಾಯಿತು. ಸಾಮಾನ್ಯವಾಗಿ ಸರ್ಕಾರಿ ಕಾರ್ಯಕ್ರಮ ನಿಗದಿತ ಅವಧಿಗಿಂತ ಅರ್ಧ ಗಂಟೆಯಿಂದ ಒಂದು ಗಂಟೆ ತಡವಾಗುತ್ತದೆ! ಆದರೆ ಅದು ಮುಸ್ಲಿಂರ ದೈನಂದಿನ ಪ್ರಾರ್ಥನಾ ಅವಧಿ ಸಮೀಪಿಸುವ ಹೊತ್ತಾಗಿರುತ್ತದೆ. ಇದರ ಸುಳಿವು ಇದ್ದವರು ಪೂರ್ವಭಾವಿಯಾಗಿಯೇ ಹುಲ್ಲು ಹಾಸಿನ ಮೇಲೆ ನಮಾಜ್ ಮಾಡುವುದಕ್ಕೆ ಅನುಕೂಲವಾಗುವಂತೆ ಪ್ಲಾಸ್ಟಿಕ್ ಹಾಸಿದ್ದರು.
5 ಗಂಟೆಯಾಗುತ್ತಿದ್ದಂತೆ ಹಲವಾರು ಮಂದಿ ಆ ಸ್ಥಳಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಸಾಮಾನ್ಯವಾಗಿ ವಿಧಾನಸೌಧದ ಆವರಣದಲ್ಲಿ ಯಾವುದೇ ಧಾರ್ಮಿಕ ಕಾರ್ಯಕ್ರಮಕ್ಕೆ ಅವಕಾಶವಿಲ್ಲ. ಆಡಳಿತ ಸೌಧ ಜಾತ್ಯತೀತ. ಗ್ರಾಮೀಣ ಪ್ರದೇಶದಲ್ಲಿ ಸಮಸ್ಯೆಯ ಮೂಟೆ ಹೊತ್ತು ಬರುವ ಬಡವರು ವಿಧಾನಸೌಧ ಪ್ರವೇಶಿಸುವುದಕ್ಕೆ ಹರಸಾಹಸ ಪಡಬೇಕು. ಒಂದೊಮ್ಮೆ ಪ್ರವೇಶ ಲಭಿಸಿದರೂ ತಮಗರಿವಿಲ್ಲದೇ ಸಂಬಂಧಪಡದ ಕಚೇರಿಗೆ ಬಂದರೆ ನಾಯಿ ಕಂಡಂತೆ ಮಾಡಲಾಗುತ್ತದೆ. ಆದರೆ ಮುಸ್ಲಿಂರು ನಮಾಜ್ ಮಾಡುವಾಗ ಮಾತ್ರ ಹೇಳುವವರೂ ಇಲ್ಲ, ಕೇಳುವವರೂ ಇಲ್ಲ.