ಬೆಂಗಳೂರು: ಮೇಕೆದಾಟು ಯೋಜನೆ ವಿರೋಧಿಸುತ್ತಿರುವ ತಮಿಳುನಾಡಿನ ಕ್ರಮ ಖಂಡಿಸಿ ಏ.18ರಂದು ನಾನಾ ಕನ್ನಡ ಸಂಘಟನೆಗಳು `ಕರ್ನಾಟಕ್ ಬಂದ್'ಗೆ ಕರೆ ನೀಡಿವೆ.
ಕಾವೇರಿ ನಮ್ಮದು, ಇಲ್ಲಿ ಯೋಜನೆ ರೂಪಿಸಲು ತಮಿಳುನಾಡಿನ ಅಪ್ಪಣೆ ಬೇಕಿಲ್ಲ. ಮೇಕೆದಾಟು ಯೋಜನೆ ವಿರೋಧಿಸುತ್ತಿರುವ ತಮಿಳುನಾಡಿಗೆ ಕೇಂದ್ರ ಯಾವುದೇ ಕಿಮ್ಮತ್ತೂ ನೀಡಬಾರದು ಎಂದು ರಾಜ್ಯಾದ್ಯಂತ ಪ್ರತಿಭಟನೆಗಳು ಮತ್ತು ಮೆರವಣಿಗೆಗಳನ್ನು ನಡೆಸಿ ಬಂದ್ ಆಚರಿಸಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಂದ್‍ಗೆ 580ಕ್ಕೂ ಹೆಚ್ಚು ನಾನಾ ಸಂಘಟನೆಗಳು ಬೆಂಬಲ ಸೂಚಿಸಿದ್ದು, ಏ.18ರಂದು ಬೆಳಗ್ಗೆ 10ಗಂಟೆಗೆ ಪುರಭವನದಿಂದ ಮೆರವಣಿಗೆ ನಡೆಸಲಾಗುವುದು. ನಂತರ ಮುಖ್ಯಮಂತ್ರಿ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಲಾಗುವುದು. ಆ ಮೂಲಕ ಮೇಕೆದಾಟು ಯೋಜನೆಗೆ ಇನ್ನೊಂದು ತಿಂಗಳಲ್ಲಿ ಶಂಕು ಸ್ಥಾಪನೆ ಮಾಡಬೇಕು ಹಾಗೆಯೇ ಉತ್ತರ ಕರ್ನಾಟಕದ ಅಭಿವೃದ್ಧಿಗೂ ಒತ್ತು ನೀಡಬೇಕು. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕೆಂದೂ ಒತ್ತಾಯಿಸಲಾಗುವುದು ಎಂದರು.
ಬಂದ್‍ಗೆ ಸರ್ಕಾರಿ ನೌಕರರು, ಖಾಸಗಿ ಸಂಸ್ಥೆಗಳ ಕನ್ನಡ ಸಂಘಟನೆಗಳು, ಲಾರಿ ಮಾಲೀಕರು, ಚಾಲಕರ ಸಂಘಟನೆಗಳು, ಆಟೋ ಚಾಲಕರ ಸಂಘಗಳು ಬೆಂಬಲ ಸೂಚಿಸಿವೆ. ಹಾಗೆಯೇ ಕನ್ನಡ ಸಾಹಿತ್ಯ ಪರಿಷತ್ ಮತ್ತು ಎಲ್ಲಾ ರೀತಿಯ ಕನ್ನಡ ಸಂಘಟನೆಗಳು ಮತ್ತು ಸಿಪಿಎಂ ಪಕ್ಷ ಬೆಂಬಲ ಸೂಚಿಸಿದೆ.
ಅಂದಹಾಗೆ ಈ ಹೋರಾಟ ರಾಜ್ಯ ಸರ್ಕಾರದ ವಿರುದ್ಧ ನಡೆಯುತ್ತಿರುವುದಲ್ಲ. ಬದಲಾಗಿ ಮೇಕೆದಾಟು ವಿರೋಧಿಸುತ್ತಿರುವ ತಮಿಳುನಾಡಿನ ವಿರುದ್ಧ ಮಾಡುತ್ತಿರುವ ಶಕ್ತಿ ಪ್ರದರ್ಶನ. ಆದ್ದರಿಂದ ಈ ಹೋರಾಟದಲ್ಲಿ ಎಲ್ಲಾ ಸಂಘಟನೆಗಳು ಭಾಗವಹಿಸಬೇಕೆಂದು ವಾಟಾಳ್ ವಿನಂತಿಸಿದರು. ಕನ್ನಟ ಸಂಘಟನೆಗಳ ಒಕ್ಕೂಟದ ಸಾ.ರಾ. ಗೋವಿಂದ್ ಮಾತನಾಡಿದರು.
ಜಯಲಲಿತಾ ಬೆಂಬಲಿಸಲಿ
ಮೇಕೆದಾಟು ವಿಚಾರದಲ್ಲಿ ತಮಿಳುನಾಡು ನಡೆಸಿದ ಬಂದ್‍ನಲ್ಲಿ ಎಲ್ಲಾ `ಮನುಷ್ಯ ಪ್ರಾಣಿ'ಗಳೂ ಒಂದಾಗಿದ್ದವು. ಅದೇ ಮಾದರಿಯಲ್ಲಿ ಇಲ್ಲಿಯೂ ಏಕತೆ ಇರಬೇಕು. ಹೋರಾಟದ ಮೂಲಕ ಏಕ ದನಿ ಮೊಳಗಿಸಬೇಕು. ಹಾಗೆ ನೋಡಿದರೆ ಕರ್ನಾಟಕ ಬಂದ್‍ಗೆ ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಕೂಡ ಬೆಂಬಲ ವ್ಯಕ್ತಪಡಿಸಬೇಕು. ಏಕೆಂದರೆ, ಜಯಲಲಿತಾ ಕರ್ನಾಟಕದವರು. ಆದ್ದರಿಂದ ಅವರೂ ನಮ್ಮಗೆ ಬೆಂಬಲ ಸೂಚಿಸಬೇಕು ಎಂದು ಮೂದಲಿಸಿದರು.
ಮೇಕೆದಾಟ ಯೋಜನೆಗೆ ವಿರೋಧ ವ್ಯಕ್ತಪಡಿಸಿ ತಮಿಳುನಾಡಿ ಕೇಂದ್ರ ಸರ್ಕಾರಕ್ಕೆ ಆಕ್ಷೇಪ ಪತ್ರ ಸಲ್ಲಿಸಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನ ರಾಜ್ಯದಲ್ಲೇ ಇದ್ದಾರೆ. ಅವರಿಗೆ ರಾಜ್ಯದ ಸಂಸದರು ಮೇಕೆ ದಾಟು ಕುರಿತು ಒಂದು ಮನವಿ ಸಲ್ಲಿಸಿಲ್ಲ. ಇದು ದುರಂತ ಎಂದು ವಾಟಾಳ್ ಬೇಸರ ವ್ಯಕ್ತಪಡಿಸಿದರು.