ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ. ರವಿ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸರ್ಕಾರ ಸಲ್ಲಿಸಿರುವ ಆಕ್ಷೇಪಣೆ ಮಹಿಳಾ ಐಎಎಸ್ ಅಧಿಕಾರಿಗೆ ಕುಂದು ತರುವ ರೀತಿಯದ್ದು ಎಂದು ಅರ್ಜಿದಾರರ ಪರ ಹಿರಿಯ ವಕೀಲ ಸಜ್ಜನ್ ಪೂವಯ್ಯ ಹೈಕೋರ್ಟ್‍ನಲ್ಲಿ ವಾದ ಮಂಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಐಎಎಸ್ ಅಧಿಕಾರಿ ಪತಿ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾ.ಅಬ್ದುಲ್ ನಜೀರ್ ಪೀಠದ ಮುಂದೆ ವಾದ ಮಂಡಿಸಿದ ಪೂವಯ್ಯ, ವಾಸ್ತವವಾಗಿ ಯಾವುದಾದರೂ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿದ್ದು, ಆರೋಪಿ ತಪ್ಪಿಸಿಕೊಂಡಿದ್ದರೆ ಮಾತ್ರ ಅವರ ಮಾಹಿತಿ ಬಹಿರಂಗಪಡಿಸಲು ಸರ್ಕಾರಕ್ಕೆ ಸ್ವಾತಂತ್ರ್ಯವಿದೆ. ಆದರೆ, ಇದು ಆ ರೀತಿಯ ಪ್ರಕರಣವಲ್ಲ. ಇಲ್ಲಿ ಅರ್ಜಿದಾರರ ಪತ್ನಿಯ ವೈಯಕ್ತಿಕ ಹಕ್ಕು ಮತ್ತು ಗೌರವ ಕಾಪಾಡಿಕೊಳ್ಳಬೇಕಿದೆ. ನ್ಯಾಯಾಲಯ ಮಧ್ಯೆ ಪ್ರವೇಶಿಸಿ ಹಕ್ಕನ್ನು ರಕ್ಷಿಸಬೇಕು ಎಂದು ವಾದಿಸಿದರು.
ಸಿಐಡಿ ಪಾತ್ರವಿಲ್ಲ
ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್.ಪೊನ್ನಣ್ಣ ವಾದ ಮಂಡಿಸಿ, `ತನಿಖೆಯ ಮುಂದಿನ ಹಂತಕ್ಕೆ ಸಹಕಾರಿ ಎಂದು ಅನಿಸಿದಾಗ ಮಾಹಿತಿ ಬಹಿರಂಗಪಡಿಸಬಹುದು. ಅಲ್ಲದೇ ಸಂಪೂರ್ಣ ಪ್ರಕರಣವನ್ನು ಸರ್ಕಾರ ಸಿಬಿಐಗೆ ಒಪ್ಪಿಸಿದೆ. ಈ ಹಂತದಲ್ಲಿ ಸಿಐಡಿ ಪಾತ್ರ ಇಲ್ಲಿ ಉದ್ಭವಿಸುವುದಿಲ್ಲ ಮತ್ತು ಸದನದಲ್ಲಿ ಹೇಳಿಕೆ ಕೊಡುವಂತಹ ಅವಶ್ಯಕತೆ ಇಲ್ಲ' ಎಂದು ವಾದಿಸಿದರು. ವಾದ ವಿವಾದ ಆಲಿಸಿದ ಪೀಠ ವಿಚಾರಣೆಯನ್ನು ಏ.9ಕ್ಕೆ ಮುಂದೂಡಿದೆ.
ಅರ್ಜಿ ಹಿಂದಕ್ಕೆ ಹೈಕೋರ್ಟ್‍ನ ಆದೇಶ ಉಲ್ಲಂಘಿಸಿ ಸಿಐಡಿ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ಸೋರಿಕೆ ಮಾಡಿದ್ದಾರೆಂದು ಆರೋಪಿಸಿ ಐಎಎಸ್ ಅಧಿಕಾರಿ ಪತಿ ಸುರೇರ್ ರೆಡ್ಡಿ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು. ವಿಚಾರಣೆ ಕೈಗೆತ್ತಿಕೊಂಡಿದ್ದ ನ್ಯಾ.ಎನ್.ಕುಮಾರ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಅರ್ಜಿದಾರರ ಪರ ವಕೀಲರು ಅರ್ಜಿಯಲ್ಲಿ ಕೆಲವು ತಾಂತ್ರಿಕ ದೋಷವಿದ್ದು, ಅದನ್ನು ಸರಿಪಡಿಸಿ ಹೊಸದಾಗಿ ಸಲ್ಲಿಸುವುದಾಗಿ ಪೀಠಕ್ಕೆ ಜ್ಞಾಪನ ಪತ್ರ ಸಲ್ಲಿಸಿದರು. ಇದನ್ನ ಪೀಠ ಪರಿಗಣಿಸಿದೆ. ಅರ್ಜಿಯಲ್ಲಿ ರಾಜ್ಯ ಸರ್ಕಾರ, ಸಿಐಡಿ, ಕೆಲ ಪತ್ರಿಕೆಯ ಸಂಪಾದಕರನ್ನು ಪ್ರತಿವಾದಿಯನ್ನಾಗಿ ಮಾಡಲಾಗಿತ್ತು.