ಕೋಲಾರ: ನಗರದ ಗಾಂಧಿನಗರದಲ್ಲಿ 45 ವರ್ಷಗಳಿಂದ ರಸ್ತೆ ಬದಿಯ ಪುಟ್ಟ ಮುರಕಲು ಮನೆಯಲ್ಲಿ ವಾಸವಾಗಿದ್ದ ದಲಿತ ಮಹಿಳೆ ಮುನಿಯಮ್ಮ ಹಿಂದಿನ ಜಿಲ್ಲಾಧಿಕಾರಿ ದಿವಂಗತ ಡಿ.ಕೆ.ರವಿಗೆ ಕೊಟ್ಟ ಮಾತಿನಂತೆ ಮನೆಯನ್ನು ಮಂಗಳವಾರ ಖಾಲಿ ಮಾಡಿ ಬಾಡಿಗೆ ಮನೆಗೆ ತೆರಳಿದ್ದಾರೆ.
ಗಾಂಧಿನಗರದಲ್ಲಿ ರಸ್ತೆ ಅಗಲೀಕರಣಕ್ಕಾಗಿ ಮುನಿಯಮ್ಮ ಮಕ್ಕಳು, ಮೊಮ್ಮಕ್ಕಳೊಂದಿಗೆ ವಾಸವಿದ್ದ ಮನೆಯನ್ನು ತೆರವುಗೊಳಿಸಲು ನಗರಸಭೆ ತೀರ್ಮಾನಿಸಿ ನೋಟಿಸ್ ಜಾರಿ ಮಾಡಿತ್ತು. ಸದರಿ ಮನೆ ತೆರವುಗೊಳಿಸಿದಲ್ಲಿ ಮುನಿಯಮ್ಮ ಬೀದಿಪಾಲಾಗುತ್ತಾರೆಂದು ರವಿ ಅವರಿಗೆ ಉಪ ವಿಭಾಗಾಧಿಕಾರಿ ಮಂಜುನಾಥ್ ಹಾಗೂ ನಗರಸಭೆ ಅಧ್ಯಕ್ಷ ಮುಬಾರಕ್ ತಿಳಿಸಿದ್ದರು.
ಮುನಿಯಮ್ಮ ಕಥೆ ಕೇಳಿ ಮರುಗಿದ ರವಿ ಆಶ್ರಯ ಯೋಜನೆಯಡಿ ಮುನಿಯಮ್ಮಗೆ ನಿವೇಶನ ಕಲ್ಪಿಸಿ, ಮನೆ ನಿರ್ಮಾಣಕ್ಕೆ ಸಾಲ ವ್ಯವಸ್ಥೆ ಮಾಡಲು ಮುಂದಾಗಿದ್ದರು. ಮುನಿಯಮ್ಮ ಹಾಗೂ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲು ಪತ್ನಿ ಕುಸುಮಾ ಹಾಗೂ ಅಧಿಕಾರಿಗಳೊಂದಿಗೆ ಕಳೆದ ವರ್ಷದ ಗಾಂಧಿ ಜಯಂತಿಯಂದು ಮುನಿಯಮ್ಮ ಮನೆಗೆ ಹೋಗಿ ಊಟ ಸೇವಿಸಿ ಅಸ್ಪೃಶ್ಯತೆ ನಿವಾರಣೆಗೆ ಹೊಸ ಭಾಷ್ಯ ಬರೆದಿದ್ದರು. ಇದಾದ ಕೆಲವೇ ದಿನಗಳಲ್ಲಿ ರವಿ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದರಿಂದ ಮುನಿಯಮ್ಮಗೆ ದಕ್ಕಿದ ಪರ್ಯಾಯ ವ್ಯವಸ್ಥೆ ಕೈತಪ್ಪಿತ್ತು. ಈ ನಡುವೆ ಗಾಂಧಿನಗರದಲ್ಲಿ ರಸ್ತೆ ಅಗಲೀಕರಣಕ್ಕೆ ಮೀಸಲಾಗಿದ್ದ ಅನುದಾನ ಸಕಾಲಕ್ಕೆ ಬಳಕೆ ಆಗಿಲ್ಲವೆಂಬ ಕಾರಣಕ್ಕೆ ಕರ್ನಾಟಕ ಮುನ್ಸಿಪಲ್ ರಿಸೋರ್ಸ್ ಪ್ರಾಜೆಕ್ಟ್ (ಕೆಎಂಆರ್‍ಪಿ) ಅಧಿಕಾರಿಗಳು ಮಾ.31ಕ್ಕೆ ಅನುದಾನ ಹಿಂದಿರುಗಿಸಲು ನಗರಸಭೆಗೆ ಸೂಚಿಸಿದ್ದರು.
ಅನುದಾನ ವಾಪಸ್ ಹೋದರೆ ಮತ್ತೆ ಸರ್ಕಾರದಿಂದ ಹಣ ವಾಪಸ್ ತರುವುದು ಕಷ್ಟವೆಂದು ತಿಳಿದ ಅಧಿಕಾರಿಗಳು ಮುನಿಯಮ್ಮ ಅವರ ಮನವೊಲಿಸಿ ರಸ್ತೆಯಲ್ಲಿದ್ದ ಮನೆಯನ್ನು ತೆರವು ಮಾಡುವಂತೆ ಹಾಗೂ 3 ತಿಂಗಳಲ್ಲಿ ಆಶ್ರಯ ಯೋಜನೆಯಲ್ಲಿ ನಿವೇಶನ ಮಂಜೂರು ಮಾಡಿಸುವ ಭರವಸೆ ನೀಡಿದ್ದರು. ಮುನಿಯಮ್ಮ ಬಾಡಿಗೆ ಮನೆಗೆ ಸ್ಥಳಾಂತರವಾದ ನಂತರ ಅವರ ಮುರುಕಲು ಮನೆಯನ್ನು ನಗರಸಭೆ ಸಿಬ್ಬಂದಿ ನೆಲಸಮಗೊಳಿಸಿದ್ದಾರೆ. ಮುನಿಯಮ್ಮ ಬಾಡಿಗೆ ಮನೆಯಲ್ಲಿ ವಾಸಿಸಬೇಕಾಗಿರುವುದರಿಂದ ನಗರಸಭೆ ಅಧ್ಯಕ್ಷ ಬಿ.ಎಂ.ಮುಬಾಕರ್ ಅವರು ವೈಯುಕ್ತಿಕವಾಗಿ ಮುನಿಯಮ್ಮಗೆ ರು.15 ಸಾವಿರ ನೀಡಿದ್ದಾರೆ.