ಬೆಂಗಳೂರು: ಗೋವಾದಲ್ಲಿರುವ ಕನ್ನಡಿಗರ ಒಕ್ಕಲೆಬ್ಬಿಸುವ ಅಲ್ಲಿನ ಸರ್ಕಾರದ ಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ರಾಜ್ಯ ಸರ್ಕಾರ ಕೂಡಲೇ ಮಧ್ಯ ಪ್ರವೇಶಿಸಿ ಕನ್ನಡಿಗರ ನೆರವಿಗೆ ಧಾವಿಸಬೇಕೆಂಬ ಆಗ್ರಹ ಕೇಳಿಬಂದಿದೆ.
25 ಜೆಸಿಬಿ ಹಾಗೂ 2,500ಕ್ಕೂ ಹೆಚ್ಚು ಪೊಲೀಸರ ನೆರವಿನಿಂದ ವೃದ್ಧರು, ಬಾಣಂತಿಯರು, ಮಕ್ಕಳೆನ್ನದೇ ಸುಮಾರು 205 ಮನೆಗಳನ್ನು ನೆಲಸಮ ಮಾಡುವಂತೆ ಅಲ್ಲಿನ ಸರ್ಕಾರ ನಿರ್ಧಾರ ತೆಗೆದುಕೊಂಡಿರುವುದು ಖಂಡನೀಯ. ಇದು ಹಿಟ್ಲರ್ ಸಂಸ್ಕೃತಿಯಾಗಿದೆ ನಾಗರಿಕರ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ.
ಹೀಗಾಗಿ ರಾಜ್ಯ ಸರ್ಕಾರ ಈ ಕೂಡಲೇ ಮಧ್ಯಪ್ರವೇಶ ಮಾಡಿ ಅವರ ನೆರವಿಗೆ ಬರಬೇಕು ಎಂದು ಕರ್ನಾಟಕ ಗಡಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಪ್ರೊ. ಬಿ.ಕೆ. ರಾವ್‍ಬೈಂದೂರ್ ಆಗ್ರಹಿಸಿದ್ದಾರೆ. ಏ. 14ರಂದು ಬೈನಾದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ನಾಡೋಜ ಡಾ. ಪಾಟೀಲ ಪುಟ್ಟಪ್ಪ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ. ಗೋವಾ ಕನ್ನಡಿಗರಿಗೆ ಶೀಘ್ರವೇ ಪುನರ್ವಸತಿ ಕಲ್ಪಿಸಬೇಕು ಎಂದು ಸೇನೆಯ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ ಆಗ್ರಹಿಸಿದ್ದಾರೆ.