ಜಿಲ್ಲಾ ಸುದ್ದಿ

ಬಂದ್‍ಗೆ ಸಿದ್ಧರಾಗಿ

Srinivasamurthy VN

ಬೆಂಗಳೂರು: ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದ ನಾನಾ ಕನ್ನಡ ಪರ ಸಂಘಟನೆಗಳು ಶನಿವಾರ ಕರೆ ನೀಡಿರುವ
ಕರ್ನಾಟಕ ಬಂದ್'ಗೆ ಭಾರಿ ಬೆಂಬಲ ವ್ಯಕ್ತವಾಗಿದ್ದು, ಎಲ್ಲ ಕಡೆಗಳಲ್ಲಿ ಸಂಚಾರ ಮತ್ತು ಅಂಗಡಿ-ಮುಂಗಟ್ಟು ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ.

ಕನ್ನಡ ಚಳವಳಿ ವಾಟಾಳ್ ಪಕ್ಷದ ನೇತೃತ್ವದೊಂದಿಗೆ ಕನ್ನಡ ಸಂಘಟನೆಗಳ ಒಕ್ಕೂಟ'ಬಂದ್‍ಗೆ ಕರೆ ನೀಡಿದೆ. ಶನಿವಾರ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತುರ್ತು ಸೇವೆಗಳನ್ನು ಹೊರತುಪಡಿಸಿದಂತೆ ಉಳಿದೆಲ್ಲ ಚಟುವಟಿಕೆಗಳೂ ಬಂದ್ ಆಗಲಿವೆ. ಇದಕ್ಕೆ ರಾಜ್ಯಾದ್ಯಂತ ನೂರಾರು ಸಂಘಟನೆಗಳು ಸ್ವಯಂ ಪ್ರೇರಣೆಯಲ್ಲಿ ಬೆಂಬಲ ಸೂಚಿಸಿ, ಬಂದ್‍ನಲ್ಲಿ ಭಾಗವಹಿಸುವುದಾಗಿ ಹೇಳಿವೆ.

ಸರ್ಕಾರಿ ಕಚೇರಿಗಳೂ ಬಂದ್
ಸರ್ಕಾರಿ ನೌಕರರ ಸಂಘವೂ ಬಂದ್‍ಗೆ ಬೆಂಬಲಿಸಿರುವುದರಿಂದ ಸರ್ಕಾರಿ ಕಚೇರಿಗಳು ಅಂದು ಸ್ವಯಂ ಪ್ರೇರಣೆಯಿಂದ ಬಾಗಿಲು ಮುಚ್ಚುವ ಸಾಧ್ಯತೆಗಳಿವೆ. ಉಳಿದಂತೆ ಕೆಲವು ಹಾಲು, ಪೇಪರ್, ಅಂಬ್ಯುಲೆನ್ಸ್, ಅಗ್ನಿಶಾಮಕ ವಾಹನ, ಔಷಧ ಅಂಗಡಿಗಳು, ಆಸ್ಪತ್ರೆಗಳ ಸೇವೆ ಎಂದಿನಂತೆ ಮುಂದುವರಿಯಲು ಕನ್ನಡ ಪರ ಸಂಘಟನೆಗಳ ಒಕ್ಕೂಟವೇ ಮನವಿ ಮಾಡಿದೆ.
ಬೆಂಗಳೂರು ನಗರ ಮಾತ್ರವಲ್ಲ, ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಬಂದ್ ಆಚರಿಸಲು ನೂರಾರು ಸಂಘಟನೆಗಳು ಸ್ವಯಂ ಪ್ರೇರಣೆಯಿಂದ ಮುಂದೆ ಬಂದಿವೆ.

ಬಸ್ ಸ್ಥಗಿತ ಖಚಿತ
ಬೆಂಗಳೂರಿನಲ್ಲಿ ಬಂದ್‍ಗೆ ಬಿಎಂಟಿಸಿ ಮತ್ತು ಕೆಎಸ್ ಆರ್‍ಟಿಸಿ ಕಾರ್ಮಿಕ ಸಂಘಟನೆಗಳು ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸಿಲ್ಲವಾದರೂ, ಬಂದ್ ಆಚರಣೆಯ ಸಂದರ್ಭದಲ್ಲಿ ನಡೆಯುವ ಪ್ರತಿಭಟನಾ ಮೆರವಣಿಗೆಗಳ ಹಿನ್ನೆಲೆಯಲ್ಲಿ ಬಸ್ ಸಂಚಾರ ಸ್ಥಗಿತಗೊಳ್ಳುವುದು ಖಚಿತವಿದೆ. ಇನ್ನು ಟ್ಯಾಕ್ಸಿ ಮತ್ತು ಆಟೋ ಚಾಲಕರ ಸಂಘ, ಲಾರಿ ಮಾಲೀಕರ ಸಂಘಟನೆಗಳು, ಮ್ಯಾಕ್ಸಿ
ಕ್ಯಾಬ್ ಚಾಲಕರ ಸಂಘಟನೆಗಳು ಬಂದ್ ಬೆಂಬಲಿಸಿ, ತಮ್ಮ ನಿತ್ಯದ ಓಡಾಟದಿಂದ ದೂರ ಉಳಿಯಲಿವೆ ಎಂದು ಸಂಘಟನೆಗಳ ಮುಖಂಡರು ತಿಳಿಸಿದ್ದಾರೆ.

SCROLL FOR NEXT