ಬೆಂಗಳೂರು: ಬಿಬಿಎಂಪಿ ಚುನಾವಣೆಯನ್ನು ಮುಂದೂಡಬಾರದು, ನಗರವನ್ನು ಮೂರು ಭಾಗವಾಗಿಸುವುದು ಬೇಡ ಎಂದು ಒತ್ತಾಯಿಸಿ ಬಿಜೆಪಿ ನಾಯಕರು ಶುಕ್ರವಾರ ದಿನಪೂರ್ತಿ ಧರಣಿ ನಡೆಸಿದರು.
ಮೌರ್ಯ ವೃತ್ತದಲ್ಲಿ ಶುಕ್ರವಾರ ದಿನವಿಡೀ ಸಾಂಕೇತಿಕ ಧರಣಿ ನಡೆಸಿದ ಬಿಜೆಪಿ ಮುಖಂಡರು- ಕಾರ್ಯಕರ್ತರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲದೆ, `ಅಖಂಡ ಬೆಂಗಳೂರು' ನಮ್ಮ ಘೋಷಣೆ, ಯಾವುದೇ ಕಾರಣಕ್ಕೂ ಪಾಲಿಕೆ ವಿಭಜನೆಗೆ ಬಿಡುವುದಿಲ್ಲ, ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಬಿಜೆಪಿ ನಾಯಕರುಒಕ್ಕೊರಲಿನಿಂದ ಘೋಷಿಸಿದರು. ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಮಾತನಾಡಿ, `ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಎಡಬಿಡಂಗಿ ಸರ್ಕಾರ, ಯಡವಟ್ಟುಗಳನ್ನು ಮಾಡಿಕೊಂಡೇ ಆಡಳಿತ ನಡೆಸುತ್ತಿದ್ದಾರೆ. ಅಧಿಕಾರಕ್ಕೆ ಬಂದ ದಿನದಿಂದಲೇ ಇವರು ಬರೀ ಯಡವಟ್ಟಿನ ನಿರ್ಣಯಗಳನ್ನೇ ತೆಗೆದುಕೊಳ್ಳುತ್ತಿದ್ದಾರೆ' ಎಂದು ಟೀಕಿಸಿದರು.
ಐಎಎಸ್ ಅಧಿಕಾರಿ ಡಿ.ಕೆ.ರವಿ ಸಾವಿನಪ್ರಕರಣದ ತನಿಖೆಯನ್ನು ವ್ಯಾಪಕ ಹೋರಾಟದ ನಂತರವೇ ಸಿಬಿಐಗೆ ವಹಿಸಿದರು. ಬಿಬಿಎಂಪಿ ಚುನಾವಣೆ ನಡೆಸುವಂತೆ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದರೂ ಮೇಲ್ಮನವಿ ಸಲ್ಲಿಸಿದರು. ನಂತರ ಸುಗ್ರೀವಾಜ್ಞೆ ತರಲು ಹೋಗಿ ಹಿನ್ನಡೆ ಅನುಭವಿಸಿದರು. ಈಗ ವಿಶೇಷ ಅಧಿವೇಶನ ನಡೆಸುತ್ತಿದ್ದಾರೆ. ಬಿಬಿಎಂಪಿ ಚುನಾವಣೆಯನ್ನು ಮುಂದೂಡಬೇಕು ಎನ್ನುವ ಏಕೈಕ ಉದ್ದೇಶದಿಂದ ಇವರು ಪಾಲಿಕೆ ವಿಭಜನೆ ಮಾಡುತ್ತಿದ್ದಾರೆಂದು ಆಪಾದಿಸಿದರು.
ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಮಾತನಾಡಿ, `ಅಧಿಕಾರಕ್ಕೆ ಬಂದು 2 ವರ್ಷವಾದರೂ ಬಿಬಿಎಂಪಿಗೆ ಒಂದು ರುಪಾಯಿ ಅನುದಾನ ನೀಡಿಲ್ಲ, ಈಗಚುನಾವಣೆ ನಡೆದರೆ ಅಧಿಕಾರಕ್ಕೆ ಬರುವುದಿಲ್ಲ. ತಾವು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವುದು ಅನಿವಾರ್ಯ ಎಂಬುದು ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತಿದೆ. ಇದೇ ಕಾರಣಕ್ಕಾಗಿ ಚುನಾವಣೆಯನ್ನೇ ಮುಂದೂಡಲು ಪಾಲಿಕೆಯನ್ನು ಮೂರು ಭಾಗ ಮಾಡಲು ಹೊರಟಿದೆ' ಎಂದು ಟೀಕಿಸಿದರು.
ಧರಣಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ, ಮಾಜಿ ಸಚಿವ ವಿ.ಸೋಮಣ್ಣ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಶಾಸಕರಾದ ಸುರೇಶ್ ಕುಮಾರ್, ಡಾ.ಅಶ್ವತ್ಥ ನಾರಾಯಣ, ದಾಸರಹಳ್ಳಿ ಮುನಿರಾಜು, ಎಸ್.ಆರ್. ವಿಶ್ವನಾಥ್, ಅರವಿಂದ ಲಿಂಬಾವಳಿ, ವಿಜಯ ಕುಮಾರ್, ಸತೀಶ್ ರೆಡ್ಡಿ, ಮುಖಂಡರಾದ ಚಿ.ನಾ.ರಾಮು, ಪ್ರಕಾಶ್ ಸೇರಿದಂತೆ ಹಲವು ಬಿಜೆಪಿ ಶಾಸಕರು ಹಾಗೂ ಪರಿಷತ್ ಸದಸ್ಯರು ಪಾಲ್ಗೊಂಡಿದ್ದರು.