ಜಿಲ್ಲಾ ಸುದ್ದಿ

ಸಂಗೀತಾಳ ಸಾವು ಸ್ವಾಭಾವಿಕವಲ್ಲ: ಪೋಷಕರ ಆರೋಪ

Srinivasamurthy VN

ಬೆಂಗಳೂರು: ನಿತ್ಯಾನಂದ ಆಶ್ರಮದಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದ ತಮಿಳುನಾಡು ಮೂಲದ ಸಂಗೀತಾಳ ಸಾವು ಸ್ವಾಭಾವಿಕ ಸಾವಲ್ಲ. ಆಕೆಯನ್ನು ಹತ್ಯೆ ಮಾಡಲಾಗಿದೆ. ಈ ಸಂಬಂಧ ಪೊಲೀಸರು ಮರಣೋತ್ತರ ಪರೀಕ್ಷೆ ವರದಿ ಮುಚ್ಚಿಟ್ಟು, ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಮೃತಳ ತಾಯಿ ಝಾನ್ಸಿ ರಾಣಿ ಆರೋಪಿಸಿದ್ದಾರೆ.

ಈ ಸಂಬಂಧ ಸಂಗೀತಾಳ ಮೃತದೇಹವನ್ನು 2 ಬಾರಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. 2ನೇ ಬಾರಿ ನಮ್ಮ ಸಮ್ಮುಖದಲ್ಲೇ ಪರೀಕ್ಷೆ ನಡೆಯಿತು. ಈ ವೇಳೆ ಆಕೆಯ ಸಾಕಷ್ಟು ಅಂಗಾಂಗಗಳು ಇಲ್ಲದಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಪೊಲೀಸರಾಗಲಿ ಆಸ್ಪತ್ರೆ ಸಿಬ್ಬಂದಿಯಾಗಲಿ ಸೂಕ್ತ ಉತ್ತರ ನೀಡುತ್ತಿಲ್ಲ. ನ್ಯಾಯಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ಈ ಕುರಿತು ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂಪ್ರಕಾಶ್ ಅವರಿಗೂ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಆದರೆ, ಇಷ್ಟು ದಿನ ನಡೆದ ಸಂಗತಿ ಗಮನಿಸಿದರೆ ತಮಗೆ ನ್ಯಾಯ ಸಿಗುವ ನಂಬಿಕೆಯಿಲ್ಲ. ನಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿದರು.

2ನೇ ಬಾರಿ ಮರಣೋತ್ತರ ಪರೀಕ್ಷೆ
ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಮತ್ತೆ 2ನೇ ಬಾರಿ ತಿರುಚಿ ಜಿಲ್ಲೆಯ ಆಕೆ ಹುಟ್ಟೂರಿನ ನವಣೂರ್‍ನ ಸ್ಮಶಾನದಲ್ಲೇ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಈ ವೇಳೆ ಮೆದುಳಿನ ಭಾಗದಲ್ಲಿ ರವಿಕೆ ಹಾಗೂ ಚಿಂದಿಬಟ್ಟೆ ಇದ್ದವು. ಕಿಡ್ನಿ ಇರಲಿಲ್ಲ. ಈ ಬಗ್ಗೆ ಆಸ್ಪತ್ರೆ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ದಾನ ಮಾಡಲಾಗಿದೆ ಎಂದಿದ್ದರು. ಒಟ್ಟಾರೆ ನಮ್ಮ ಅನುಮಾನಗಳಿಗೆ ಸೂಕ್ತ ಉತ್ತರ ಸಿಗುತ್ತಿಲ್ಲ. ಪ್ರತಿಯೊಬ್ಬರು ವಿವಿಧ ರೀತಿಯ ಹೇಳಿಗಳನ್ನು ನೀಡುತ್ತಿದ್ದು, ಹಾರಿಕೆ ಉತ್ತರ ಹೇಳುತ್ತಿದ್ದಾರೆ. 3ನೇ ವೈದ್ಯರ ಸಲಹೆ ಕೇಳುವ ಸಲುವಾಗಿ ಮರಣೋತ್ತರ ಪರೀಕ್ಷೆಯ ವರದಿಯನ್ನು ಬಹಿರಂಗಗೊಳಿಸಿಲ್ಲ ಎಂಬ ಮಾತು ಸಹ ಕೇಳಿಬರುತ್ತಿದೆ ಎಂದು ಆರೋಪಿಸಿದರು.

ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನ ವೈದ್ಯರ ಮೇಲೆ ತಮಗೆ ಅನುಮಾನವಿದೆ.ಈ ಸಂಬಂಧ ಪೊಲೀಸರು ಸೂಕ್ತ ತನಿಖೆ ನಡೆಸಬೇಕು ಹಾಗೂ ತಪ್ಪಿತಸ್ಥರನ್ನು ಶೀಘ್ರದಲ್ಲಿ ಬಂಧಿಸಬೇಕು ಎಂದು ಆಗ್ರಹಿಸಿದರು. ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಮೇಶ್ ಗೌಡ ಸುದ್ದಿಗೋಷ್ಠಿಯಲ್ಲಿ ಇದ್ದರು.

SCROLL FOR NEXT