ಜಿಲ್ಲಾ ಸುದ್ದಿ

ಬಿಬಿಎಂಪಿ ತ್ರಿವಿಭಜನೆ ವಿಧೇಯಕಕ್ಕೆ ಮೇಲ್ಮನೆಯಲ್ಲೂ ಅನುಮೋದನೆ: ಸಿಎಂ

Shilpa D
ಮೈಸೂರು: ಬಿಬಿಎಂಪಿ ತ್ರಿವಿಭಜನೆ ವಿಧೇಯಕಕ್ಕೆ ಮೇಲ್ಮನೆಯಲ್ಲೂ ಅನುಮೋದನೆ ದೊರೆಯಲಿದೆ ಎಂಬ ವಿಶ್ವಾಸವನ್ನು ಸಿಎಂ ಸಿದ್ದರಾಮಯ್ಯ  ವ್ಯಕ್ತಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು ವಿಧಾನ ಸಭೆಯಲ್ಲಿ ಕರ್ನಾಟಕ ನಗರ ಪಾಲಿಕೆಗಳ ವಿಧೇಯಕ (ತಿದ್ಧುಪಡಿ) 2015 ಅಂಗೀಕೃತಗೊಂಡಿದ್ದು, ಸಮಯ ಮೀರಿದ್ದರಿಂದ ಪರಿಷತ್ ನಲ್ಲಿ ಚರ್ಚೆ ಮುಂದೂಡಲಾಗಿದೆ.  ಅಲ್ಲಿಯೂ ವಿಧೇಯಕಕ್ಕೆ ಒಪ್ಪಿಗೆ ದೊರೆಯುವ ವಿಶ್ವಾಸ ಇದೆ ಎಂದರು.
ಪಾರದರ್ಶಕ ಮತ್ತು ಜವಾಬ್ದಾರಿಯುತ ಆಡಳಿತದ ಉದ್ದೇಶದಿಂದ ಬಿಬಿಎಂಪಿಯನ್ನು ಮೂರು ಭಾಗವಾಗಿ ವಿಂಗಡಿಸಲಾಗುತ್ತಿದೆಯೇ ವಿನಾ ಇದರ ಹಿಂದೆ ಬೇರೆ ದುರುದ್ದೇಶವಿಲ್ಲ .
ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ವ್ಯಾಪಕ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿರುವುದು ತಜ್ಞರ ವರದಿಯಿಂದ ತಿಳಿದು ಬಂದಿದೆ.  ಆ ಬಗ್ಗೆ ಸಮಜಾಯಿಷಿ ಕೇಳಿ ಬರೆದಿದ್ದ ಪತ್ರಕ್ಕೆ ಉತ್ತರ ನೀಡಲೂ ಬಿಬಿಎಂಪಿಗೆ ಸಾಧ್ಯವಾಗಿಲ್ಲ, ಆದ್ದರಿಂದ ಬಿಬಿಎಂಪಿಯನ್ನು ಸೂಪರ್ ಸೀಡ್ ಮಾಡಿ ಆಡಳಿತಾಧಿಕಾರಿಯನ್ನು ನೇಮಿಸಲಾಗಿದೆ ಎಂದರು. 
ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಬಿಜೆಪಿ ಅವಧಿಯಲ್ಲಿಯೇ ಡಿಪಿಆರ್ ಸಿದ್ಧವಾಗಿದ್ದರೇ ನಾವು ಈಗ ಖರ್ಚು ಮಾಡಿಕೊಂಡು ಡಿಪಿಆರ್ ಸಿದ್ಧಪಡಿಸುತ್ತಿರಲಿಲ್ಲ.
ಬಿಜೆಪಿಯವರು ಮೊದಲಿಂದಲೂ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ. ಅಲ್ಲದೇ ಬಿಜೆಪಿ ಸಹ ಚುನಾವಣಾ ಪ್ರಣಾಳಿಕೆಯಲ್ಲಿ ಬಿಬಿಎಂಪಿಯನ್ನು ವಿಭಜಿಸುವುದಾಗಿ ಹೇಳಿತ್ತು. 
ಈಗ ಅವರೇ ವಿರೋಧಿಸುತ್ತಿದ್ದಾರೆ. ನಾನೂ ವಿಧಾನಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿ ಮಾತನಾಡಿದ್ದೆ. 
ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗ ಬಿಬಿಎಂಪಿ ವಿಭಜಿಸುವುದಾಗಿ ಹೇಳಿದ್ದೀರಿ. ಅಂದಿನ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ಸಹ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಆದ್ದರಿಂದ ಈಗ ರಾಜಕೀಯವಾಗಿ ಈ ವಿಷಯ ಬಳಸಬೇಡಿ  ಎಂದು ಮನವಿ ಮಾಡಿರುವುದಾಗಿ ಸಿದ್ದರಾಮಯ್ಯ ತಿಳಿಸಿದ್ರು. 
SCROLL FOR NEXT