ಬೆಂಗಳೂರು: ಪ್ರತಿಯೊಬ್ಬರು ಬೇವಿನ ಮರ ಬೆಳೆಸಿ, ಆ ಮೂಲಕ ನಿಮ್ಮ ನೆಚ್ಚಿನ ನಟ ಡಾ. ರಾಜ್ ಕುಮಾರ್ ಹೇಳಿದಂತೆ ಪರಿಸರ ಉಳಿಸಿ, ಆರೋಗ್ಯ ಕಾಪಾಡಿ ಎನ್ನುವ ರಾಜ್ ನೀತಿಯನ್ನು ಉಳಿಸಿ ಎಂದು ನಟ ರಾಘವೇಂದ್ರ ರಾಜಕುಮಾರ್ ಮನವಿ ಮಾಡಿದ್ದಾರೆ.
ಗುರುವಾರ ಡಾ. ರಾಜ್ ಕುಮಾರ್ ಕುಟುಂಬ ಆಯೋಜಿಸಿದ್ದ 2015 ನೇ ಸಾಲಿನ ಅಪ್ಪಾಜಿ ಸೌಹಾರ್ದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೇವಿನ ಮರ ಆರೋಗ್ಯಕ್ಕೆ ಮದ್ದು. ಬಹುದೊಡ್ಡ ಆಕ್ಸಿಜನ್ ಪೂರೈಸುವ ಜೀವಂತ ಯಂತ್ರ. ಸಾಧ್ಯವಾದರೆ ಬೇವಿನ ಮರ ನೆಡುವ ಕಾರ್ಯಕ್ಕೆ ಚಾಲನೆ ನೀಡಿ. ಮೊದಲು ನನ್ನಿಂದಲೇ ಅಂಥ ಕೆಲಸ ಶುರುವಾಗಲಿ ಎಂದು ಅಪ್ಪಾಜಿ ಹೇಳಿದ್ದು ನೆನಪು ಇದೆ. ಅವರ ಹುಟ್ಟುಹಬ್ಬದ ಹೊಸ ಯೋಜನೆ ಅಂದರೆ, ಬೇವಿನ ಮರ ನೆಡುವುದು.
ನಮ್ಮ ಕುಟುಂಬದಿಂದ 200 ಬೇವಿನ ಮರ ನೆಡುವ ಮೂಲಕ ಅಪ್ಪಾಜಿ ಅವರ ಜನ್ಮದಿನ ಆಚರಿಸುತ್ತಿದ್ದೇವೆ. ಡಾ. ರಾಜ್ ಅವರನ್ನು ಅಭಿಮಾನಿಸುವ ಪ್ರತಿಯೊಬ್ಬರು ಈ ಕೆಲಸಕ್ಕೆ ಕೈ ಜೋಡಿಸಬೇಕು ಎಂದು ರಾಘವೇಂದ್ರ ರಾಜಕುಮಾರ್ ಮನವಿ ಮಾಡಿಕೊಂಡರು.
ರಾಜ್ ಕುಮಾರ್ ಅಭಿಮಾನಿಗಳು ಈ ಕೆಲಸಕ್ಕೆ ಕೈ ಹಾಕಿದರೆ ಬೆಂಗಳೂರು ಮಾತ್ರವಲ್ಲ, ಇಡೀ ಕರ್ನಾಟಕ ಗಾರ್ಡನ್ ಸಿಟಿ ಆಗುತ್ತದೆ ಅಂಥ ತಾಕತ್ತು ಅಪ್ಪಾಜಿ ಅಭಿಮಾನಿದಗಳಲ್ಲಿ ಇದೆ. ನಮ್ಮ ಒಂದು ಕುಟುಂಬದಿಂದ ಮುಂದಿನ ವರ್ಷದೊಳಗೆ ಒಂದು ಲಕ್ಷ ಬೇವಿನ ಮರ ನೆಡಲಿದ್ದೇವೆ. ಇದೇ ರೀತಿ ರಾಜ್ ಅಭಿಮಾನಿಗಳು ಕೂಡ ತಮ್ಮ ತಮ್ಮ ಊರುಗಳಲ್ಲಿ ಬೇವಿನ ಮರ ನೆಡುವುದಾಗಿ ಸಂಕಲ್ಪ ಮಾಡುವಂತಾಗಲಿ. ಆ ಮೂಲಕ ಇಂದಿನಿಂದಲೇ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ಬೇವಿನ ಮರ ಬೆಳೆಸುವ ಕೆಲಸ ಜಾರಿಯಾಗಲಿ ಎಂದು ಆಶಿಸಿದರು.
ಪತ್ರಕರ್ತ ಶೆಣೈ ಮಾತನಾಡಿ ರಾಜ್ ಜೀವನ ಒಂದು ಫಿಲಾಸಫಿ ಇದ್ದಂತೆ. ರಾಜ್ ಕುಮಾರ್ ಅವರ ಮೌಲ್ಯಗಳನ್ನು ಅವರ ಮಕ್ಕಳು ಉಳಿಸಿಕೊಂಡು ಬಂದಿದ್ದಾರೆ. ರಾಜ್ ಇಲ್ಲದಿದ್ದಾಗಲೂ ಪ್ರತಿ ವರ್ಷ ಅವರ ಹೆಸರಿನಲ್ಲಿ ಅಪ್ಪಾಜಿ ಸೌಹಾರ್ದ ಪ್ರಶಸ್ತಿ ನೀಡುತ್ತಿದ್ದಾರೆ. ಈ ಪ್ರಶಸ್ತಿ ಕೇವಲ ಸಿನಿಮಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗದೆ ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸಲಿ ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಹಿರಿಯ ನಟ ಶ್ರೀನಾಥ್, ಹಿರಿಯ ನಿರ್ದೇಶಕ ಕೆ. ಎಸ್.ಎಲ್ ಸ್ವಾಮಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಪಾರ್ವತಮ್ಮ ರಾಜ್ ಕುಮಾರ್, ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಹಾಗೂ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಥಾಮಸ್ ಡಿಸೋಜಾ, ಸಾ.ರಾ. ಗೋವಿಂದು ಸೇರಿದಂತೆ ಹಲವರು ಉಪಸ್ಥಿತರಿದ್ದರು.