ಜಿಲ್ಲಾ ಸುದ್ದಿ

ಕ್ವಾರಿಯಲ್ಲಿ ಮೃತಪಟ್ಟ ನೇಪಾಳದ ಕೇಮ್ ಕಥೆ ಇದು

Mainashree

ಬೆಂಗಳೂರು: ಎರಡು ವರ್ಷದಲ್ಲಿ ಎಂಜಿನಿಯರಿಂಗ್ ಪದವಿ ಮುಗಿಸಿದ್ದರೆ ನೇಪಾಳದ ಹುಟ್ಟೂರು ಗ್ರಾಮಕ್ಕೆ ಮೊದಲ ಎಂಜಿನಿಯರ್ ಎನ್ನುವ ಕೀರ್ತಿಗೆ ಪಾತ್ರವಾಗುತ್ತಿದ್ದ. ಆದರೆ, ವಿಧಿಯಾಟವೇ ಬೇರೆಯಾಗಿತ್ತು. ಕೊನೆಗೂ ಆ ಗ್ರಾಮದ ಮೊದಲ ಎಂಜಿನಿಯರ್‍ನನ್ನು ತನ್ನತ್ತ ಸೆಳೆದುಕೊಂಡಿತು. ಇದು ಬೆಟ್ಟಹಲಸೂರಿನ ಕ್ವಾರಿಯಲ್ಲಿ ಸ್ನೇಹಿತರೊಂದಿಗೆ ಈಜಲು ಹೋಗಿ ಮೃತಪಟ್ಟ ನೇಪಾಳದ ಕೈಲಾಲಿ ಗ್ರಾಮದ ಕೇಮ್ ಪಟಲಿ ಕಥೆ. ಇವರ ತಂದೆ ಲೀಲ್ದಾರ್ ಪಟಲಿ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸೆಕ್ಯುರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದಾರೆ. ಮುಂದೊಂದು ದಿನ ಮಗ ಒಳ್ಳೆಯ ಕೆಲಸಕ್ಕೆ ಸೇರಿ ಇಡೀ ಗ್ರಾಮಕ್ಕೆ ಹೆಸರು ತರುತ್ತಾನೆ. ತನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ಕನಸು ಕಂಡಿದ್ದರು.
ಆದರೆ, ಅದೆಲ್ಲವೂ ಈಗ ಕನಸು ಮಾತ್ರ. ಲೀಲ್ದಾರ್ ಗೆ ಗುರುವಾರವೇ ಮಗ ಮೃತಪಟ್ಟಿರುವ ಸುದ್ದಿ ಗೊತ್ತಾಯಿತು. ಶುಕ್ರವಾರ ಮಧ್ಯಾಹ್ನ ಡಾ.ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿರುವ ಶವಾಗಾರಕ್ಕೆ ಬಂದಿದ್ದರು. ಕೆಲಸ ಹಾಗೂ ಉಳಿದುಕೊಳ್ಳುವ ಸ್ಥಳ ಬಿಟ್ಟರೆ ಬೆಂಗಳೂರಿನಲ್ಲಿ ಬೇರೆನೂ ತಿಳಿಯದ ಲೀಲ್ದಾರ್ ವಿಳಾಸ ತಿಳಿಯದೇ ಹಲವು ಬಾರಿ ತಪ್ಪಿಸಿಕೊಂಡಿದ್ದು ಉಂಟು. ಸಮಾಧಾನ ಮಾಡುತ್ತಿದ್ದ ಸಂಬಂಧಿಗಳೊಂದಿಗೆ ಶವಾಗಾರದ ಬಾಗಿಲು ಬಳಿ ದುಃಖದಲ್ಲಿ ಕುಳಿತಿದ್ದ ವಯಸ್ಸಾಗಿರುವ ಲೀಲ್ದಾರ್ ಗೆ ನಿದ್ರೆ ಇಲ್ಲದೇ ಸುಸ್ತಾಗಿದ್ದರು. ಮಗ ಹೇಗೆ ಮೃತಪಟ್ಟ ಎಂಬ ವಿಚಾರವನ್ನು ಸಂಬಂಧಿಕರಿಂದ ಕೇಳಿ ತಿಳಿದು ಕೊಳ್ಳುತ್ತಿದ್ದರು. ಕೆಲವೇ ದಿನಗಳ ಹಿಂದೆ ಮಗನಿಗೆ ಹಣ ಕಳುಹಿಸಿದ್ದೆ. ಅಂದೇ ಕೊನೆ ಬಾರಿ ಮಗನ ಜತೆ ಮಾತನಾಡಿದ್ದು. ಅಭ್ಯಾಸ ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿದ್ದ. ಅದೇ, ಕೊನೆ ಮತ್ತೆ ಸಾವಿನ ಸುದ್ದಿಯೇ ಬಂದಿದ್ದು ಎಂದು ಪೊಲೀಸರ ಮುಂದೆ ಲೀಲ್ದಾರ್ ಹೇಳಿದರು. ಸಂಬಂಧಿಕರು, ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಲೀಲ್ದಾರ್, ಶವಾಗಾರದಲ್ಲಿ ಶವ ಪರೀಕ್ಷೆ ಪೂರ್ಣಗೊಂಡ ಬಳಿಕ ನೀಲಿ ಪ್ಲಾಸ್ಟಿಕ್ ಶೀಟ್‍ನಲ್ಲಿ ಶವ ಸುತ್ತುತ್ತಿದ್ದಂತೆ ದುಃಖದ ಕಟ್ಟೆ ಒಡೆದು ಕಣ್ಣಿರಿಟ್ಟರು.

ರಾಜೇಶ್ ಕ್ಲಾಸಿಗೆ ಟಾಪರ್
ಮೃತಪಟ್ಟಿರುವ ನೇಪಾಳ ಮೂಲದ ಮತ್ತೊಬ್ಬ ವಿದ್ಯಾರ್ಥಿ ರಾಜೇಶ್ ಕ್ಲಾಸಿಗೆ ಟಾಪರ್. ಇಂಟರ್ನಲ್ ಪರೀಕ್ಷೆ ಮುಗಿಸಿದ್ದ ರಾಜೇಶ್ ಖುಷಿಯಿಂದ ಈಜಾಡಲು ಬಂದಿದ್ದೆಂದು ಸ್ನೇಹಿತ ಪ್ರವೀಣ್ ತಿಳಿಸಿದ. ರಾಜೇಶ್ ಸಹೋದರ ದೆಹಲಿಯಲ್ಲಿ ವಾಸವಿದ್ದು, ಸುದ್ದಿ ತಿಳಿದು ಶುಕ್ರವಾರ ಸಂಜೆ ವೇಳೆಗೆ ನಗರಕ್ಕೆ ಬರುವ ಸಾಧ್ಯತೆ ಇದೆ. ಇಬ್ಬರು ನೇಪಾಳದವರೇ ಆಗಿದ್ದು, ಶವ ಸಂಸ್ಕಾರವನ್ನು ನಗರದಲ್ಲೇ ನಡೆಸಲು ನಿರ್ಧರಿಸಲಾಗಿದೆ ಎಂದು ಸಂಬಂಧ ತಿಳಿಸಿದರು. ಕ್ವಾರಿ ಸುತ್ತ ಮುತ್ತ ಕಬ್ಬಿಣ ಅಥವಾ ಬೇರೆ ಮಾದರಿಯ ತಡೆಗೋಡೆ ನಿರ್ಮಿಸಿ ಅಲ್ಲಿಗೆ ಯಾರೂ ತೆರಳಲು ಅವಕಾಶ ನೀಡದಂತೆ ಎಚ್ಚರವಹಿಸಬೇಕು. ಸಾಧ್ಯವಾದರೇ ಗೃಹ ರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಬೇಕು. ಸ್ಥಳ ನೋಡಿದರೆ ಎಂಥವರಿಗೂ ಈಜಬೇಕೆನಿಸದೆ ಇರದು ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫೇಸ್‍ಬುಕ್‍ನಲ್ಲಿ ಕ್ವಾರಿ ಫೋಟೋ
ಮೃತ ಕೇಮ್, ಈ ಹಿಂದೆಯೂ ಹಲವು ಬಾರಿ ಕ್ವಾರಿ ನೀರಿನಲ್ಲಿ ಸ್ನೇಹಿತರೊಂದಿಗೆ ಈಜಾಡಿದ್ದು, ಫೋಟೋಗಳನ್ನು ಫೇಸ್‍ಬುಕ್ ನಲ್ಲಿ ಹಾಕಿಕೊಂಡಿದ್ದಾನೆ. ಫೋಟೋಗಳನ್ನು ನಾನು ಲೈಕ್ ಮಾಡಿದ್ದೆ. ಆದರೆ, ಅದೇ ಜಾಗದಲ್ಲೇ ದುರಂತ ಸಂಭವಿಸುತ್ತಿದ್ದ ಎಣಿಸಿರಲಿಲ್ಲ ಎಂದು ಸಂಬಂಧಿ ಕರಣ್ ಪಟಲಿ ಹೇಳಿದರು. ನಮ್ಮ ಪಾಲಿಗೆ ಆತ ಹಿರೋ. ಒಳ್ಳೆಯ ಫುಟ್‍ಬಾಲ್ ಆಟಗಾರ. ಬಾಡಿ ಬಿಲ್ಡರ್ ಕೂಡಾ ಆಗಿದ್ದ. ಬೇರೆಯವರಿಗೂ ಬಾಡಿ ಬಿಲ್ಡಿಂಗ್ ಮಾಡುವಂತೆ ಹೇಳಿಕೊಡುತ್ತಿದ್ದ. ಒಳ್ಳೆಯ ಈಜುಗಾರನಾಗಿದ್ದ. ಸ್ನೇಹಿತನ ಬದುಕಿಸಲು ಹೋಗಿ ಮೃತಪಟ್ಟಿದ್ದಾನೆ ಎಂದು ಗೊತ್ತಾಗಿದೆ ಎಂದು ಕೇಮ್ ಹಾಸ್ಟೆಲ್‍ನಲ್ಲಿ ವಾಸವಿದ್ದ ಸ್ನೇಹಿತ ಕುಶಾಲ್ ಹೇಳಿದರು.

ಹಿಂದಿನ ಘಟನೆಗಳು
ಮಾ.2015 ತಲಘಟ್ಟಪುರ ಅವಲಹಳ್ಳಿ ಕಲ್ಲಿನ ಕ್ವಾರಿಯಲ್ಲಿ ಬಿದ್ದು ಪವನ್(15) ಮಾ.2015 ರಾಮನಗರ ಹಾರೋಹಳ್ಳಿ ಕೆರೆಯಲ್ಲಿ ಮುಳುಗಿ 3ನೇ ವರ್ಷ ಬಿಎ ವಿದ್ಯಾರ್ಥಿ ಮಾ.2015 ಮಡಿವಾಳದಲ್ಲಿ ನೀರು ತುಂಬಿದ ಹೊಂಡಕ್ಕೆ ಈಜಿಗಿಳಿದ ಇಬ್ಬರು ಬಾಲಕರು ಸಾವು ಅ.2014 ಸರ್ಕಾರಿ ಕಲಾ ಕಾಲೇಜು ಮೈದಾನದಲ್ಲಿ ಅಗೆದ ಗುಂಡಿಗೆ ಬಿದ್ದು ಯಶವಂತ(12) ಸಾವು. ಜೂ.2013 ಪರಪ್ಪನ ಅಗ್ರಹಾರ ಕೂಡ್ಲು ಗೇಟ್ ಸಮೀಪದ ಶಾಮರೆಡ್ಡಿ ಬಂಡೆಯಲ್ಲಿ ನೀರಿಗಿಳಿದ ಮೂವರು ಬಾಲಕರು ಸಾವು. ಮತ್ತೊಂದು ಶವ ಪತ್ತೆ ಕ್ವಾರಿ ನೀರಿನ 70 ಅಡಿಗೂ ಹೆಚ್ಚು ಆಳದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಹರೀಶ್ ಶವವನ್ನು ಕ್ಯಾಮೆರಾ ಸಹಾಯದಿಂದ ಪತ್ತೆ ಮಾಡಿ ಮೇಲೆತ್ತಲಾಯಿತು. ಶುಕ್ರವಾರದ ಕಾರ್ಯಾಚರಣೆಗೆ ಎನ್‍ಡಿಆರ್‍ಎಫ್ ಸಿಬ್ಬಂದಿಯೂ ಬಂದಿದ್ದರು. ಆದರೆ, ಅರ್ಧ ಗಂಟೆಯಲ್ಲೇ ಕ್ಯಾಮೆರಾ ಕಣ್ಣಿಗೆ ಶವ ಸಿಕ್ಕ ಕಾರಣ ಮೇಲೆತ್ತಲಾಯಿತು ಎಂದು ಯಲಹಂಕದ ಜಿಲ್ಲಾ ಅಗ್ನಿಶಾಮಕ ಅಧಿಕಾರಿ ತಿರುಮಲೇಶ್ ಹೇಳಿದರು.

SCROLL FOR NEXT