ಜಿಲ್ಲಾ ಸುದ್ದಿ

ದುರ್ವರ್ತನೆ: ಇನ್ಸ್ ಪೆಕ್ಟರ್ ವಿರುದ್ಧ ಇಲಾಖಾ ತನಿಖೆ

ಬೆಂಗಳೂರು: ಅಪಘಾತ ಸ್ಥಳದಲ್ಲಿ ಸಾರ್ವಜನಿಕರು ಹಾಗೂ ಮಾಧ್ಯಮದವರೊಂದಿಗೆ ದುರ್ವರ್ತನೆ ತೋರಿದ ಆರೋಪದ ಹಿನ್ನೆಲೆಯಲ್ಲಿ ಪೀಣ್ಯ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಯತಿರಾಜ್ ವಿರುದ್ಧ ಇಲಾಖಾ ತನಿಖೆಗೆ ಪೊಲೀಸ್ ಕಮಿಷನರ್ ಆದೇಶಿಸಿದ್ದಾರೆ

ತುಮಕೂರು ರಸ್ತೆ ಟಿ.ದಾಸರಹಳ್ಳಿಯಲ್ಲಿ ಶುಕ್ರವಾರ ರಾತ್ರಿ 11.45ಕ್ಕೆ ಖಾಸಗಿ ವಾಹನ ಡಿಕ್ಕಿ ಹೊಡೆದು ಪಾದಚಾರಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಇದನ್ನು ಗಮನಿಸಿದ ಸ್ಥಳೀಯರು ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆದರೆ, ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸರಲಿಲ್ಲ ಎಂದು ಸಾರ್ವಜನಿಕರು ರೊಚ್ಚಿಗೆದ್ದು ಗಲಾಟೆ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದರು.

ಈ ವೇಳೆ ಟಿವಿ ಸುದ್ದಿ ವಾಹಿನಿಗಳು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಸುದ್ದಿ ಕವರ್ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಆಗಮಿಸಿದ ಪೀಣ್ಯ ಕಾನೂನು ಸುವ್ಯವಸ್ಥೆ ಠಾಣೆ ಇನ್ಸ್ ಪೆಕ್ಟರ್ ಯತಿರಾಜು ಶವವನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಆದರೆ, ಅದಕ್ಕೆ ಸಾರ್ವಜನಿಕರು ಅವಕಾಶ ನೀಡಲು ನಿರಾಕರಿಸುತ್ತಿದ್ದರು. ಇದರಿಂದ ಅನಿವಾರ್ಯವಾಗಿ ಇನ್ಸ್ ಪೆಕ್ಟರ್ ಸಾರ್ವಜನಿಕರತ್ತ ಲಾಠಿ ಬೀಸಲು ಆರಂಭಿಸಿದ್ದರು ಎನ್ನಲಾಗಿದೆ.

ಸಾರ್ವಜನಿಕರ ಆಕ್ರೋಶ ಹಾಗೂ ಪೊಲೀಸರ ವರ್ತನೆಯನ್ನು ಚಿತ್ರೀಕರಿಸಿಕೊಳ್ಳಲಾಗುತ್ತಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಇನ್ಸ್ ಪೆಕ್ಟರ್ ಯತಿರಾಜು ಅವಾಚ್ಯ ಶಬ್ಧಗಳಿಂದ ನಿಂದಿಸಿ ಕ್ಯಾಮರಾ ಚಿತ್ರೀಕರಣಕ್ಕೆ ಅಡ್ಡಿಪಡಿಸಿದ್ದಾರೆ ಎಂದು ತಿಳಿದು ಬಂದಿದೆ. ಹೀಗಾಗಿ, ಟಿವಿ ವಾಹಿನಿ ಸಿಬ್ಬಂದಿ ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ಅವರಿಗೆ ದೂರು ನೀಡಿದ್ದಾರೆ. ಶನಿವಾರ
ಮಾಧ್ಯಮದವರು ಲಿಖಿತ ದೂರು ಹಾಗೂ ಘಟನೆಯ ಸಿಡಿ ನೀಡಿದ್ದಾರೆ. ಈ ಸಂಬಂಧ ಉತ್ತರ ವಿಭಾಗ ಡಿಸಿಪಿ ಸುರೇಶ್ ಅವರು ಬಗ್ಗೆ ತನಿಖೆ ನಡೆಸಿ ವರದಿ ನೀಡಲಿದ್ದಾರೆ ಎಂದು ಕಮಿಶನರ್ ಹೇಳಿದರು.

SCROLL FOR NEXT