ಜಿಲ್ಲಾ ಸುದ್ದಿ

ಬಸವಣ್ಣ ವಿಶ್ವದ ಧ್ರುವತಾರೆ

Rashmi Kasaragodu

ಬೆಂಗಳೂರು: ನಿಘಂಟು ತಜ್ಞ ಡಾ.ಜಿ.ವೆಂಕಟಸುಬ್ಬಯ್ಯ ಈವರಿಗೆ ಈಗ`ಬಸವಶ್ರೀ ಪ್ರಶಸ್ತಿ'ಯ ಗರಿ. ಭಾನುವಾರ ಇಲ್ಲಿನ ಶ್ರೀ ಶಿವರಾತ್ರೀಶ್ವರ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಬಸವ ವೇದಿಕೆ ನೀಡುವ `ಬಸವಶ್ರೀ ಪ್ರಶಸ್ತಿ'ಯನ್ನು ವೆಂಕಟಸುಬ್ಬಯ್ಯಗೆ ಪ್ರದಾನ ಮಾಡಲಾಯಿತು. ಈ ಸಂದರ್ಭಕ್ಕೆ ಶ್ರೀ ಶಿವರಾತ್ರಿ ದೇಶಿ ಕೇಂದ್ರ ಸ್ವಾಮೀಜಿ, ಕೇಂದ್ರ ಸಚಿವ ಅನಂತ ಕುಮಾರ್, ಸಚಿವ ಎಂ.ಬಿ.ಪಾಟೀಲ್ ಸಾಕ್ಷೀ ಭೂತರಾದರು. ಗಾಯಕಿ ಸಂಗೀತಾ ಕಟ್ಟಿ ಮತ್ತು ಸಾಹಿತಿ ಕೆ.ಸಿ.ಶಿವಪ್ಪನವರು ವಚನ ಸಾಹಿತ್ಯಶ್ರೀ ಪ್ರಶಸ್ತಿಯನ್ನು ಸ್ವೀಕರಿಸಿದರು.ನಂತರ ಮಾತನಾಡಿದ ವೆಂಕಟಸುಬ್ಬಯ್ಯ ಅವರು, `ಬಸವಣ್ಣ ದೊಡ್ಡ ವ್ಯಕ್ತಿ. ಅವರ ಹೆಸರಿನ ಪ್ರಶಸ್ತಿ ನನಗೆ ಸಂದಿರುವುದಕ್ಕೆ ಕೃತಜ್ಞನಾಗಿದ್ದೇನೆ. ಇದು ಪೂರ್ವ ಜನ್ಮದ ಪುಣ್ಯವಿರಬೇಕು. ನನ್ನ ಗುರುಗಳಾದ ವೆಂಕಣ್ಣಯ್ಯನವರ ಮಾರ್ಗದರ್ಶನದಂತೆ ವಚನಗಳನ್ನು ಓದಿಕೊಂಡೆ, ಬಸವಣ್ಣ, ಅಲ್ಲಮನ ವಚನಗಳು ನನ್ನ ವ್ಯಕ್ತಿತ್ವವನ್ನು ಪೂರ್ಣಗೊಳಿಸಿದೆವು' ಎಂದರು. ಕೇಂದ್ರ ಸಚಿವ ಅನಂತಕುಮಾರ್ ಮಾತನಾಡಿ, `ಬಸವಣ್ಣನವರು ಪ್ರಪಂಚದ ಮುಂಜಾವಿನ ಧ್ರುವತಾರೆ. 12ನೇ ಶತಮಾನದಲ್ಲಿ ಅವರ ಅನುಭವ ಮಂಟಪದ ಕಲ್ಪನೆ ಈ ಜಗತ್ತಿಗೆ ಮಾದರಿ' ಎಂದು ಹೇಳಿದರು. ವೈಚಾರಿಕ, ಸಾಮಾಜಿಕ, ಧಾರ್ಮಿಕ ಸುಧಾರಣೆಯ ಮೂಲಪುರುಷ ಜಗತ್ಜ್ಯೋತಿ ಬಸವೇಶ್ವರರು ಎಂದು ಬಣ್ಣಿಸಿದ ಅವರು, ಇಂಗ್ಲೆಂಡ್‍ನ ಸಂವಿಧಾನವನ್ನು ಜಗತ್ತಿನ ಸಂವಿಧಾನದ ಮೂಲ ಎಂದು ಕರೆಯುತ್ತಾರೆ. ಆದರೆ, ಬಸವಣ್ಣನವರ ಕಾಲದ ಅನುಭವ ಮಂಟಪ ಮೂಲ ಸಂವಿಧಾನ ಎಂದು ಹೇಳಿದರು.
ಲಂಡನ್‍ನಲ್ಲಿ ಬಸವಣ್ಣನ ಪ್ರತಿಮೆ ಸ್ಥಾಪಿಸುವ ಕೆಲಸ ನಡೆದಿದೆ. ಪ್ರತಿಮೆ ಅನಾವರಣ ಕಾರ್ಯಕ್ರಮವನ್ನು ರಾಜ್ಯ ಸರ್ಕಾರ ದೊಡ್ಡ ಮಟ್ಟದಲ್ಲಿ ಮಾಡಬೇಕಾಗಿದೆ.
ಕೇಂದ್ರ ಸರ್ಕಾರ ಸಹ ಇದಕ್ಕೆ ಸಹಕಾರ ಕೊಡಲಿದೆ ಎಂದರು. ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, `ಇದುವರೆಗೂ ಬಸವಣ್ಣನವರ ಸಿದ್ಧಾಂತ , ಪರಿಕಲ್ಪನೆ, ಆಶಯವನ್ನು ಈಡೇರಿಸಲು ಸಾಧ್ಯವಾಗಿಲ್ಲ. ಜಾತ್ಯತೀತ ಸಮಾಜದ ಕಲ್ಪನೆ ಇನ್ನೂ ದೂರದ ಮಾತು. ಮಹಿಳೆಯರಿಗೆ ಸಮಾನತೆ ಸಿಕ್ಕಿಲ್ಲ. ಮೂಢನಂಬಿಕೆ ಅಳಿದಿಲ್ಲ ಎಂದು ಹೇಳಿದರು. ಬಸವಣ್ಣನವರ ಚಿಂತನೆ, ತತ್ವ, ಆದರ್ಶಗಳನ್ನು ಜಗತ್ತಿಗೆ ಸಾರಿ ಹೇಳಬೇಕಾಗಿದೆ. ಇದಕ್ಕಾಗಿಯೇ  ಬಸವಣ್ಣನ ವರ ಜೀವನ ಚರಿತ್ರೆ, ವಚನಗಳನ್ನು ಇಂಗ್ಲಿಷ್ ರೂಪಾಂತರಗೊಳಿಸುವ ಕಾರ್ಯ ಪ್ರಾರಂಭವಾಗಿದೆ' ಎಂದರು. ವಚನ ಸಾಹಿತ್ಯ ಶ್ರೀ ಪ್ರಶಸ್ತಿ ಪಡೆದ ಕೆ.ಸಿ. ಶಿವಪ್ಪ ಹಾಗೂ ಸಂಗೀತ ಕಟ್ಟಿ ತಮ್ಮ ಅನಿಸಿಕೆ ಹಂಚಿಕೊಂಡರು.ಸುತ್ತೂರು ಶ್ರೀಗಳು ಮಾರ್ಗದರ್ಶನ ಮಾಡಿದರು. ಸಾಹಿತಿ ಡಾ. ಕಮಲಾಹಂಪನ, ಬಸವ ವೇದಿಕೆ ಕಾರ್ಯಾ ಧ್ಯಕ್ಷ ಡಾ. ಸಿ.ಸೋಮಶೇಖರ್, ಎಚ್.ಷಡಕ್ಷರಿ ವೇದಿಕೆಯಲ್ಲಿದ್ದರು.

SCROLL FOR NEXT