ಜಿಲ್ಲಾ ಸುದ್ದಿ

ಕ್ಷುಲ್ಲಕ ಕಾರಣಕ್ಕೆ ಜಗಳ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಪರಿಚಿತರ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮಹಾಲಕ್ಷ್ಮೀ ಬಡಾವಣೆ 1ನೇ ಮುಖ್ಯರಸ್ತೆಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಯಾದಗಿರಿ ಮೂಲದ ನಾರಾಯಣಸ್ವಾಮಿ(24) ಮೃತಪಟ್ಟವ. ಕೃತ್ಯ ಎಸಗಿದ ತಮಿಳುನಾಡಿನ ಚರಣ್‍ಕುಮಾರ್ ಮತ್ತು ರಾಜ್‍ಕುಮಾರ್ ಎಂಬುವರು ತಲೆಮರೆಸಿಕೊಂಡಿದ್ದು ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಾಲಕ್ಷ್ಮೀ ಬಡಾವಣೆಯಲ್ಲಿ ರಾಘವೇಂದ್ರ ಎಂಬುವರು ರಾಘೂಸ್ ಹೆಸರಿನ ಹೋಟೆಲ್ ನಡೆಸುತ್ತಿದ್ದಾರೆ.

ಅದರ ಪಕ್ಕದಲ್ಲೆ ಚರಣ್ ಕುಮಾರ್ ಹಾಗೂ ರಾಜ್‍ಕುಮಾರ್ ಪಾನ್ ಬೀಡಾ ಅಂಗಡಿ ಇಟ್ಟುಕೊಂಡಿದ್ದಾರೆ. ಇತ್ತೀಚೆಗೆ ಕೆಲಸ ಹುಡುಕುತ್ತಿದ್ದ ನಾರಾಯಣಸ್ವಾಮಿಗೆ ಪರಿಚಿತನಾದ ಚರಣ್‍ಕುಮಾರ್ ಹೋಟೆಲ್‍ನಲ್ಲಿ ನೌಕರಿ ಕೊಡಿಸಿದ್ದ. ಆದರೆ, ನಾರಾಯಣಸ್ವಾಮಿ ಮೂರು ದಿನ ದುಡಿದು ಕೆಲಸ ಬಿಡುವುದಾಗಿ ಮಾಲೀಕರಿಗೆ ಹೇಳಿದ್ದ.

ಶನಿವಾರ ರಾತ್ರಿ 11ರ ಸುಮಾರಿಗೆ ಚರಣ್ ಮತ್ತು ರಾಜ್‍ಕುಮಾರ್ ಮದ್ಯ ಸೇವಿಸಿ ಹೋಟೆಲ್‍ಗೆ ಊಟಕ್ಕೆ ಬಂದಿದ್ದರು. ಆಗ, ಮಾಲೀಕ ರಾಘವೇಂದ್ರ, ನಾರಾಯಣಸ್ವಾಮಿ ಕೆಲಸ ಬಿಡುತ್ತಿರುವ ವಿಚಾರ ಇಬ್ಬರಿಗೆ ತಿಳಿಸಿದ್ದ. ಇದರಿಂದ ಕೋಪಗೊಂಡ ಚರಣ್, ನಾರಾಯಣಸ್ವಾಮಿ ಬಳಿ ಹೋಗಿ ಕೆಲಸ ಬಿಟ್ಟ ವಿಚಾರವಾಗಿ ಪ್ರಶ್ನಿಸಿದಾಗ ಮಾತಿನ ಚಕಮಕಿ ನಡೆದಿದೆ. ಮಧ್ಯ ಪ್ರವೇಶಿಸಿದ ರಾಘವೇಂದ್ರ, ಮೂವರನ್ನು ಹೋಟೆಲ್‍ನಿಂದ ಹೊರಗೆ ಕಳುಹಿಸಿದ್ದ.

ನಂತರ ಮೂವರು ಪಕ್ಕದ ರಸ್ತೆಯ ಗಣೇಶ ದೇವಾಲಯ ಬಳಿ ತೆರಳಿ ಜಗಳವಾಡಿದ್ದಾರೆ. ಜಗಳ ವಿಕೋಪಕ್ಕೆ ತಿರುಗಿ ರಾಜ್‍ಕುಮಾರ್ ಹಾಗೂ ಚರಣ್ ಚಾಕುವಿನಿಂದ ನಾರಾಯಣಸ್ವಾಮಿ ಹೊಟ್ಟೆ ಮತ್ತು ಎದೆಗೆ ತಿವಿದು ಪರಾರಿಯಾಗಿದ್ದರು. ತೀವ್ರ ರಕ್ತಸ್ರಾವವಾಗಿದ್ದ ನಾರಾಯಣಸ್ವಾಮಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ನಂದಿನಿ ಬಡಾವಣೆ ಪೊಲೀಸರು ತಿಳಿಸಿದ್ದಾರೆ.

SCROLL FOR NEXT