ಬೆಂಗಳೂರು: ಬಿಬಿಎಂಪಿ ವಿಭಜಿಸುವ ರಾಜ್ಯ ಸರ್ಕಾರದ ಉದ್ದೇಶಿತ ಮಸೂದೆಯನ್ನು ವಿಧಾನಪರಿಷತ್ ನಿರೀಕ್ಷೆಯಂತೆ ಪರಿಶೀಲನಾ ಸಮಿತಿಗೆ ನೀಡಿದ್ದು, ಇದರೊಂದಿಗೆ ಪಾಲಿಕೆ ವಿಭಜನೆ ಸದ್ಯಕ್ಕೆ ನನೆಗುದಿಗೆ ಬಿದ್ದಂತಾಗಿದೆ. ಬಿಬಿಎಂಪಿ ಚುನಾವಣೆ ಮುಂದೂಡುವ ವಿಚಾರದಲ್ಲಿ ಸರ್ಕಾರ ಹೈಕೋರ್ಟ್ ಮೂಲಕ ಯಶಸ್ವಿಯಾಗಿದೆ.
ಬಿಬಿಎಂಪಿ ವಿಭಜನೆ ಪ್ರಯತ್ನ ತಡೆಯುವಲ್ಲಿ ಪ್ರತಿಪಕ್ಷಗಳು ಮೇಲ್ಮನೆಯ ಮೂಲಕ ಯಶಸ್ವಿಯಾಗಿವೆ. ಇತ್ತ ವಿಧಾನಪರಿಷತ್ತಿನಲ್ಲಿ ವಿಧೇಯಕ ಕುರಿತು ಪರಿಶೀಲನಾ ಸಮಿತಿ ರಚನೆ ಪ್ರಸ್ತಾಪ ಅಂಗೀಕರಿಸಿದ್ದರೂ ಅತ್ತ ವಿಧೇಯಕದ ಸೋಲು, ಗೆಲವು ನಿರೀಕ್ಷಿಸುತ್ತಿದ್ದ ವಿಧಾನಸಭೆಗೆ ವಿಧೇಯಕ ಕುರಿತ ಮಾಹಿತಿಯೇ ಹೋಗಲಿಲ್ಲ. ಪರಿಷತ್ತಿನಲ್ಲಿ ಪರಿಶೀಲನಾ ಸಮಿತಿ ರಚನೆಗೆ ತೀರ್ಮಾನಿಸಿರುವ ಹಿನ್ನೆಲೆಯಲ್ಲಿ ವಿಧೇಯಕ ಸದ್ಯಕ್ಕೆ ಪರಿಷತ್ತಿನಲ್ಲೇ ಸ್ಥಗಿತವಾದಂತಾಗಿದೆ. ಮುಂದೆ ಪರಿಶೀಲನಾ ಸಮಿತಿ ವರದಿ ಸಲ್ಲಿಸಿದ ನಂತರವಷ್ಟೇ ಈ ವಿಧೇಯಕ ಅಲ್ಲಿ ಪ್ರಸ್ತಾಪವಾಗಲಿದೆ.
ಈ ಮಧ್ಯೆ ಸದನದಲ್ಲಿ ಪರಿಶೀಲನಾ ಸಮಿತಿ ಹೇಗಿರಬೇಕು, ಹೇಗೆ ರಚಿಸಬೇಕು ಎಂಬಿತ್ಯಾದಿ ಬಗ್ಗೆ ಹೆಚ್ಚಿನ ಪ್ರಸ್ತಾಪವಾಗಲಿಲ್ಲ. ಸಮಿತಿಗೆ ಕಾಲಮಿತಿ ನಿಗದಿಪಡಿಸುವ ಕುರಿತು ಚರ್ಚೆ ನಡೆಯಲಿಲ್ಲ.ಆದರೆ ಪರಿಷತ್ ನಿಯಮಗಳ ಪ್ರಕಾರ ಈ ಪರಿಶೀಲನಾ ಸಮಿತಿ ಸದನ ತೀರ್ಮಾನಿಸಿದ 3 ತಿಂಗಳ ಒಳಗಾಗಿ ವರದಿ ಸಲ್ಲಿಸಬೇಕಿದೆ. ಹೀಗಾಗಿ ಬಿಬಿಎಂಪಿ ವಿಭಜಿಸುವ ಸರ್ಕಾರದ ಪ್ರಯತ್ನ ಮೂರು ತಿಂಗಳು ಮುಂದೆ ಹೋಗಿದೆ.
ಮುಂದೇನು ?
ಸಭಾಪತಿ ಶಂಕರಮೂರ್ತಿ ಸದ್ಯದಲ್ಲೇ ಪಕ್ಷಗಳ ನಾಯಕ ಸಭೆ ಕರೆದು ಸದಸ್ಯರನ್ನು ಸೂಚಿಸುವಂತೆ ಹೇಳುತ್ತಾರೆ. ಪಕ್ಷದ ನಾಯಕರಿಂದ ಸದಸ್ಯರ ಪಟ್ಟಿ ಸಿಗುತ್ತಿದ್ದಂತೆ ಸಮಿತಿ ರಚಿಸಿ ಆದೇಶ ಹೊರಡಿಸುತ್ತಾರೆ. ಈ ಪ್ರಕ್ರಿಯೆ ಇನ್ನೊಂದು ವಾರದಲ್ಲಿ ನಡೆಸುವ ಸಾಧ್ಯತೆ. ಆನಂತರ ಸಮಿತಿ ಸದಸ್ಯರು ನಾನಾ ಹಂತದ ಸಭೆಗಳನ್ನು ನಡೆಸಬೇಕು. ಸಭಾಪತಿ ಅವರಿಗೆ ವರದಿ ಸಲ್ಲಿಸಬೇಕು. ಅಲ್ಲಿವರೆಗೂ ಸರ್ಕಾರ ವಿಧೇಯಕದಲ್ಲಿ ಪ್ರಸ್ತಾಪಿಸಿದಂತೆ ಬಿಬಿಎಂಪಿ ವಿಭಜಿಸುವ ಪ್ರಯತ್ನಗಳನ್ನು ಮಾಡುವಂತಿಲ್ಲ.