ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ `ರಸ್ತೆ ಸುರಕ್ಷತಾ ಮಸೂದೆ' ವಿರೋಧಿಸಿ ಏ.30ರಂದು ವಿವಿಧ ಕಾರ್ಮಿಕ ಸಂಘಟನೆಗಳ ಕರೆ ನೀಡಿರುವ ಬಂದ್ ಹಿನ್ನೆಲೆಯಲ್ಲಿ ನಗರದಲ್ಲಿ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗುವುದು ಎಂದು ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ತಿಳಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, `ಶಾಂತಿಯುತ ಪ್ರತಿಭಟನೆಗೆ ಅವಕಾಶವಿದೆ. ಆದರೆ, ಬಲವಂತವಾಗಿ ಜನರನ್ನು ಬಂದ್‍ನಲ್ಲಿ ಪಾಲ್ಗೊಳ್ಳಲು ಒತ್ತಾಯಿಸಿದರೆ ಕ್ರಮ ಜರುಗಿಸಲಾಗುತ್ತದೆ. ಬಿಎಂಟಿಸಿ ಹಾಗೂ ಕೆಎಸ್ಆರ್‌ಟಿಸಿ ಬಸ್ ಗಳ ಸಂಚಾರಕ್ಕೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ಈ ಸಂಬಂಧ ಸಾರಿಗೆ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದು, ಸಂಚರಿಸುವ ಬಸ್ ಗಳಿಗೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗುತ್ತದೆ ಎಂದರು.
ಬಂದ್ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ವಹಿಸಲಾಗಿದ್ದು, ಇದಕ್ಕೆ ಸಂಘಟನೆಗಳೂ ಸಹಕರಿಸುವಂತೆ ಆಯುಕ್ತರು ಮನವಿ ಮಾಡಿದರು. ಕೇಂದ್ರ ಸರ್ಕಾರದ `ರಸ್ತೆ ಸುರಕ್ಷತಾ ಮಸೂದೆ' ವಿರೋಧಿಸಿ ಸಾರಿಗೆ ಇಲಾಖೆಯ ನೌಕರರ ಸಂಘಟನೆಗಳ ಸೇರಿದಂತೆ ಎಡಪಂಥೀಯ ಸಂಘಟನೆಗಳು ರಾಷ್ಟ್ರ ವ್ಯಾಪ್ತಿ ಏ.30ರಂದು 14 ತಾಸುಗಳು ಬಂದ್‍ಗೆ ಕರೆ ನೀಡಿವೆ.