ಬೆಂಗಳೂರು: ಕೇಂದ್ರ ಸರ್ಕಾರದ ಭೂ ಸ್ವಾಧೀನ ಸುಗ್ರೀವಾಜ್ಞೆ ಬ್ರಿಟಿಷ್ ಕಾಯ್ದೆಗಿಂತಲೂ ಕಠೋರ. ದೇಶದ ರೈತರಿಗೆ ಇದು ಉರುಳಾಗಿ ಪರಿಣಮಿಸಲಿದೆ. ಇದರಿಂದ ಬಹುತೇಕ ಕೃಷಿಭೂಮಿ ಕಾರ್ಪೊರೇಟ್ ವಲಯದ ಹಿಡಿತಕ್ಕೆ ಸಿಲುಕುವುದು ಖಚಿತವೆಂದು ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್ ಆತಂಕ ವ್ಯಕ್ತಪಡಿಸಿದರು.
ಭೂ ಸ್ವಾಧೀನ ಸುಗ್ರೀವಾಜ್ಞೆ ವಿರೋಧಿಸಿ ಎಡಪಕ್ಷ ಹಾಗೂ ರೈತ ಸಂಘಟನೆ ನೇತೃತ್ವದೊಂದಿಗೆ ನಾನಾ ಸಂಘಟನೆಗಳು ಮಂಗಳವಾರ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ `ನಮ್ಮ ಭೂಮಿ, ನಮ್ಮ ಹಕ್ಕು ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು. ಚುನಾವಣಾಪೂರ್ವ ದೇಶದ ಜನತೆಗೆ ಬಿಜೆಪಿ ನೀಡಿದ್ದ ಭರವಸೆ ಹುಸಿಯಾಗಿದೆ. ಜನರ ಆಶೋತ್ತರಗಳಿಗೆ ಸ್ಪಂದಿಸುವ ಬದಲಿಗೆ, ತಾವು ಪ್ರಧಾನಿಯಾಗಲು ಪರೋಕ್ಷ ವಾಗಿ ಕಾರಣರಾದ ಅಂಬಾನಿ, ಅದಾನಿ ಋಣ ತೀರಿಸಲು ಮೋದಿ ಸರ್ಕಾರ ಮುಂದಾಗಿದೆ ಎಂದರು.
ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಕಿಸಾನ್ ಸಭಾದ ಮುಖಂಡರಾದ ಹನಾನ್ ಮುಲ್ಲಾ, ಲೋಕೇಶ್ ಕುಮಾರ್, ವಿಜುಕೃಷ್ಣ, ಶಾಸಕ ಹಾಗೂ ರೈತ ಸಂಘದ ವರಿಷ್ಠ ಕೆ.ಎಸ್.ಪುಟ್ಟಣಯ್ಯ, ಚುಕ್ಕಿ ನಂಜುಂಡಸ್ವಾಮಿ, ನಂದಿನಿ ಜಯರಾಂ, ದಸಂಸ ಮುಖಂಡರಾದ ಮಾವಳ್ಳಿ ಶಂಕರ್, ಲಕ್ಷ್ಮಿಮನಾರಾಯಣ ನಾಗವಾರ, ಸಿಪಿಎಂ ಮುಖಂಡ ಜಿ.ಎನ್. ನಾಗರಾಜ್, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ಹಾಜರಿದ್ದರು.
ರೈತ ಮುಖಂಡ ಕೆ.ಟಿ. ಗಂಗಾಧರ್ ಸಮಾವೇಶದ ನಿರ್ಣಯ ಮಂಡಿಸಿದರು. ರೈತ ಸಂಘದ ಅಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಪ್ರಸ್ತಾವಿಕವಾಗಿ ಮಾತನಾಡಿದರು. ಸಮಾವೇಶಕ್ಕೂ ಮುನ್ನ ನಗರದ ಕೇಂದ್ರ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನವನದವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು. ರಾಜ್ಯದ ನಾನಾ ಕಡೆಗಳಿಂದ ರೈತರು, ಕಾರ್ಮಿಕರು, ದಲಿತ ಸಂಘಟನೆ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನರಗುಂದ, ಕೋಲಾರ ಹಾಗೂ ಚಿಕ್ಕಬಳ್ಳಾಪುರದಿಂದ ಪಾದಯಾತ್ರೆಯ ನೇತೃತ್ವವಹಿಸಿದ್ದ ರೈತರು, ಕಾರ್ಮಿಕರನ್ನು
ವೇದಿಕೆಯಲ್ಲಿ ಸನ್ಮಾನಿಸಲಾಯಿತು.