ಬೆಂಗಳೂರು: ಯುವತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವಿಚಾರಣೆ ನೆಪದಲ್ಲಿ ನೀಡಿದ ಹಿಂಸೆಯನ್ನು ತಾಳಲಾರದೆ ಯುವಕನೊಬ್ಬ ರೈಲಿಗೆ ತಲೆಕೊಟ್ಟ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹೆಬ್ಬಗೋಡಿಯಲ್ಲಿ ಬುಧವಾರ ನಡೆದಿದೆ.
ದೀಪು(29) ಮೃತ ಯುವಕನಾಗಿದ್ದು, ಈತ ಹಾಸನದ ಅರಕಲಗೂಡಿನ ನಿವಾಸಿಯಾಗಿದ್ದಾನೆ. ಕೆಲಸಕ್ಕಾಗಿ ಬೆಂಗಳೂರಿಗೆ ಬಂದು ಖಾಸಗಿ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಇದೇ ಕಂಪನಿಯಲ್ಲಿಯೇ ಮತ್ತೊಬ್ಬ ಅಕ್ಷತಾ (26) ಎಂಬ ಯುವತಿಯೂ ಕಾರ್ಯನಿರ್ವಹಿಸುತ್ತಿದ್ದಳು. ದೀಪು ಹಾಗೂ ಅಕ್ಷತಾ ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದರಿಂದಾಗಿ ದೀಪು ತನ್ನ ವಿಳಾಸದ ದಾಖಲುಗಳನ್ನೇ ನೀಡಿ ಸಿಮ್ ಕಾರ್ಡ್ ಒಂದನ್ನು ಅಕ್ಷತಾಳಿಗೆ ಕೊಡಿಸಿದ್ದರು. ಆದರೆ ಮಾರ್ಚ್ 15 ರಂದು ಇದ್ದಕ್ಕಿದ್ದಂತೆ ದೀಪು ಬಳಿ ಬಂದ ಅಕ್ಷತಾ ನಾನು ಮುಂಬೈಗೆ ಹೋಗುತ್ತಿದ್ದೇನೆಂದು ಹೇಳಿ ದೀಪುವಿಗೆ ಸಿಮ್ ಕಾರ್ಡ್ ನ್ನು ಹಿಂತಿರುಗಿಸಿದ್ದಾಳೆ.
ನಂತರ ಅದಾವ ಕಾರಣಕ್ಕೋ ಏನೋ ಈಕೆ ಮಾರ್ಚ್ 16 ರಂದು ನಗರ ಬಿಟ್ಟು ಹೋಗಿದ್ದಾಳೆ. ಒಂದೂವರೆ ತಿಂಗಳಾದರೂ ಈಕೆಯ ಸುಳಿವು ಪೋಷಕರಿಗೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಯುವತಿಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲಿಸರು ದೀಪುವನ್ನು ವಿಚಾರಣೆಗೊಳಪಡಿಸಿದ್ದರು. ವಿಚಾರಣೆಯಲ್ಲಿ ಪೊಲೀಸರು ಸಾಕಷ್ಟು ಹಿಂಸೆ ನೀಡಿದ್ದು, ಹಿಂಸೆ ತಾಳಲಾರದೆ ಆತ್ಮಹತ್ಯೆಗೆ ಶರಣಾಗುತ್ತಿದ್ದೇನೆ. ನನ್ನ ಸಾವಿಗೆ ಪೊಲೀಸರೇ ಕಾರಣ ಎಂದು ಮೃತ ದೀಪು ಸಾಯುವುದಕ್ಕೂ ಮುನ್ನ ಡೆತ್ ನೋಟ್ ಬರೆದಿರುವುದಾಗಿ ತಿಳಿದುಬಂದಿದೆ.
ಪ್ರಕರಣ ದಾಖಲಿಸಿಕೊಂಡಿರುವ ಹೆಬ್ಬಗೋಡಿ ಪೊಲೀಸರು ತನಿಖೆ ಮುಂದುರೆಸಿದ್ದಾರೆ.