ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ಬಂದಿದ್ದು ಸಿಬಿಐ ಹಾಗೂ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವೈದ್ಯರ ತಂಡ ನಗರಕ್ಕೆ ಆಗಮಿಸಿ ಮಾಹಿತಿ ಸಂಗ್ರಹಿಸಿ ದೆಹಲಿಗೆ ಮರಳಿದೆ.
ಏಮ್ಸ್ ಆಸ್ಪತ್ರೆ ವಿಜ್ಞಾನ ಪ್ರಯೋಗಾಲಯ ಮುಖ್ಯಸ್ಥ ಸುಧೀರ್ ಗುಪ್ತಾ ನೇತೃತ್ವದಲ್ಲಿ ಮೂವರು ವೈದ್ಯಾಧಿಕಾರಿಗಳು ಹಾಗೂ ಸಿಬಿಐ ಅಧಿಕಾರಿಗಳ ತಂಡ ರವಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ಕೋರಮಂಗಲದ ಫ್ಲ್ಯಾಟ್‍ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ರವಿ ಅವರು ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಪೂರಕ ಸಾಕ್ಷ್ಯ ಸಂಗ್ರಹಿಸಲು ಅಧಿಕಾರಿಗಳ ತಂಡ ಫ್ಲ್ಯಾಟ್ ಗೆ ಭೇಟಿ ನೀಡಿ ನೇಣು ಬಿಗಿದುಕೊಂಡಿದ್ದ ಫ್ಯಾನ್, ನಿಲ್ಲಲು ಬಳಸಿದ್ದ ಕುರ್ಚಿಯ ನಡುವಿನ ಅಂತರವನ್ನು ಪರಿಶೀಲಿಸಿದ್ದಾರೆ.
ಕುರ್ಚಿಯ ಮೇಲೆ ನಿಂತರೆ ಫ್ಯಾನ್ ಕೈಗೆ ಎಟುಕುವುದೇ ಅಥವಾ ಬೇರೆ ಮಾರ್ಗದಿಂದ ನೇಣು ಬಿಗಿದುಕೊಂಡರೇ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಏಮ್ಸ್ ತಂಡ ಪರಿಶೀಲನೆ ನಡೆಸಿದೆ. ಅಷ್ಟೇ ಅಲ್ಲದೇ ರವಿ ಅವರ ಶವದ ಮರಣೋತ್ತರ ಪರೀಕ್ಷೆ ನಡೆಸಿದ ವಿಕ್ಟೋರಿಯಾ ಆಸ್ಪತ್ರೆ ವೈದ್ಯರನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿದ್ದಾರೆ. ಶವ ಇಳಿಸಿದ ನಗರ ವಿಧಿ ವಿಜ್ಞಾನ ಪ್ರಯೋಗಾಲಯ ಸಿಬ್ಬಂದಿಯಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ತಿಳಿದು ಬಂದಿದೆ.
ಆತ್ಮಹತ್ಯೆ ಬಗ್ಗೆ ಸಿಬಿಐ ಅಧಿಕಾರಿಗಳಿಗೆ ಇದ್ದ ಅನುಮಾನ ನಿವಾರಿಸಿಕೊಳ್ಳಲು ಏಮ್ಸ್ ಅಧಿಕಾರಿಗಳ ತಂಡ ನಗರಕ್ಕೆ ಆಗಮಿಸಿತ್ತು. ಎರಡು ದಿನಗಳ ಕಾಲ ಮಾಹಿತಿ ಸಂಗ್ರಹಿಸಿರುವ ಅಧಿಕಾರಿಗಳು ದೆಹಲಿಗೆ ಮರಳಿದ್ದು ಇನ್ನು 10 ದಿನಗಳಲ್ಲಿ ಸಿಬಿಐಗೆ ವರದಿ ಸಲ್ಲಿಸಲಿದ್ದಾರೆಂದು ತಿಳಿದು ಬಂದಿದೆ. ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರು ಕೋರಮಂಗಲದ ಫ್ಲ್ಯಾಟ್‍ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಏಪ್ರಿಲ್ 16ರಂದು ಶವ
ಪತ್ತೆಯಾಗಿತ್ತು.