ಬೆಂಗಳೂರು: ನಿಗದಿ ಮಾಡಿದ ಮಾನದಂಡಗಳ ಪರೀಕ್ಷೆಯಲ್ಲಿ ನಪಾಸಾದ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಮೂರು ಪ್ರಮುಖ ನಗರಗಳನ್ನು ಸ್ಮಾರ್ಟ್ ಸಿಟಿ ಯೋಜನಾ ವ್ಯಾಪ್ತಿಗೆ ಸೇರಿಸಿಕೊಳ್ಳದೇ ಇರಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ನಗರಾಭಿವೃದ್ಧಿ ಸಚಿವ ವಿನಯ್ ಕುಮಾರ್ ಸೊರಕೆ ಅವರೇ ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಈ ವಿಷಯ ತಿಳಿಸಿದ್ದು, ಮಂಗಳೂರು, ಶಿವಮೊಗ್ಗ, ಬೆಳಗಾವಿ, ಹುಬ್ಬಳ್ಳಿ-ಧಾರವಾಡ, ತುಮಕೂರು ಮತ್ತು ದಾವಣಗೆರೆ ನಗರ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಗೊಂಡಿವೆ. ಆದರೆ ಕೇಂದ್ರ ಸರ್ಕಾರ ನಿಗದಿ ಮಾಡಿದ 15 ಮಾನದಂಡಗಳಿಗೆ ಬೆಂಗಳೂರು, ಮೈಸೂರು ಮತ್ತು ಕಲಬುರಗಿ ನಗರಗಳು ಸೇರದೇ ಇರುವ ಹಿನ್ನೆಲೆಯಲ್ಲಿ ಅವುಗಳನ್ನು ಕೈ ಬಿಡಲಾಗಿದೆ. ಆದರೆ ರಾಜ್ಯ ಸರ್ಕಾರ ಈ ಮೂರು ನಗರಗಳನ್ನು ಕೇಂದ್ರದ ಮಾದರಿಯಲ್ಲೇ ಅನುಷ್ಠಾನಗೊಳಿಸುತ್ತದೆ ಎಂದು ಹೇಳಿದರು.
ಕೇಂದ್ರದ ಈ ಯೋಜನೆಗೆ ರಾಜ್ಯದ ರಾಜಧಾನಿ ಸೇರದೇ ಇರುವುದಕ್ಕೆ ಕಾರಣವೇನು? ಅಂಥ ಕಳಪೆ ಆಡಳಿತವನ್ನು ಬಿಬಿಎಂಪಿ ನೀಡಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಸೊರಕೆ, ಈ ಮೂರು ನಗರಗಳು ಸೇರಿಲ್ಲ. ಯಾವ ಕಾರಣಕ್ಕೆ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಆದರೆ, ರಾಜ್ಯ ಸರ್ಕಾರವೇ ವಾರ್ಷಿಕ ರೂ. 100 ಕೋಟಿ ನೀಡುವ ಮೂಲಕ ಈ ನಗರಗಳನ್ನು ಅಭಿವೃದ್ಧಿಪಡಿಸುತ್ತದೆ ಎಂದು ತಿಳಿಸಿದರು.
ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಗೊಂಡ ನಗರಗಳಿಗೆ ಐದು ವರ್ಷದ ಅವಧಿಗೆ ಕೇಂದ್ರ ಸರ್ಕಾರ ಪ್ರತಿ ವರ್ಷ ರೂ.100 ಕೋಟಿ ಒದಗಿಸುತ್ತದೆ. ಇದಕ್ಕೆ ರಾಜ್ಯ ಸರ್ಕಾರ ಹೊಂದಾಣಿಕೆ ಅನುದಾನ ರೂಪದಲ್ಲಿ ರೂ.100 ಕೋಟಿ ನೀಡುತ್ತದೆ. ಇದರ ಜತೆಗೆ ಪಿಪಿಪಿ ಮಾದರಿಯಲ್ಲಿ ಯೋಜನೆಗಳಿಗೆ ಹಣ ಕ್ರೋಡೀಕರಿಸುವುದಕ್ಕೆ ಅವಕಾಶವಿದೆ. ಅಗತ್ಯ ಯೋಜನಾ ವರದಿ ತಯಾರಿಸಿ ಕಳುಹಿಸುವುದಕ್ಕೆ ಕೇಂದ್ರ ಸರ್ಕಾರ ರೂ. 2 ಕೋಟಿ ನೀಡುತ್ತದೆ. ಇದರ ಆಧಾರದ ಮೇಲೆ ಪ್ರತಿ ವರ್ಷ ನಗರಗಳ ಅಭಿವೃದ್ಧಿ ನಡೆಯುತ್ತದೆ.
ಈ ವರ್ಷ ದೇಶದ 20 ನಗರಗಳು ಈ ಯೋಜನೆಗೆ ಆಯ್ಕೆಗೊಳ್ಳುವ ಸಾಧ್ಯತೆ ಇದ್ದು ರಾಜ್ಯಕ್ಕೂ ಇದರ ಲಾಭ ದೊರಕುವ ವಿಶ್ವಾಸವಿದೆ ಎಂದರು. ಈ 6 ನಗರಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ನಾವು ಈಗಾಗಲೇ ಪ್ರಸ್ತಾವ ಕಳುಹಿಸಿದ್ದೇವೆ. ರೂ. 2 ಕೋಟಿ ಬಿಡುಗಡೆಯಾದ ನಂತರ ಸ್ಮಾರ್ಟ್ ಸಿಟಿ ಪ್ರಸ್ತಾಪವನ್ನು ಕಳಹಿಸಿ 2ನೇ ಹಂತದ ಸ್ಪರ್ಧೆಗೆ ತಯಾರಿ ನಡೆಸುತ್ತೇವೆ ಎಂದರು. ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ
ಅಟಲ್ ಮಿಷನ್ ಫಾರ್ ರಿಜ್ಯುವನೇಶನ್ ಆ್ಯಂಡ್ ಅರ್ಬನ್ ಟ್ರಾನ್ಸ್ ಪೊರ್ಟೇಶನ್ (ಅಮೃತ) ಯೋಜನೆಗೆ ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಎಲ್ಲ ನಗರಗಳನ್ನು ಸೇರಿಸಲು ನಿರ್ಧರಿಸಲಾಗಿದೆ. ಇದಕ್ಕೆ ಕರ್ನಾಟಕದ ಬೆಂಗಳೂರು ನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಭದ್ರಾವತಿ, ಕೋಲಾರ, ರಾಬರ್ಟಸನ್ ಪೇಟೆ, ಮೈಸೂರು, ಮಂಗಳೂರು, ಉಡುಪಿ, ಹಾಸನ, ಚಿಕ್ಕಮಗಳೂರು, ಮಂಡ್ಯ, ಧಾರವಾಡ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಗದಗ-ಬೆಟ್ಟಗೇರಿ, ರಾಣೆಬೆನ್ನೂರು, ಗುಲ್ಬರ್ಗ, ಬೀದರ್, ಬಳ್ಳಾರಿ, ಗಂಗಾವತಿ, ಹೊಸಪೇಟೆ, ರಾಯಚೂರು ನಗರಗಳು ಸೇರ್ಪಡೆಗೊಂಡಿವೆ. ಬಾದಾಮಿ ಪಟ್ಟಣವನ್ನು ಪಾರಂಪರಿಕ ನಗರ ಎಂದು ಈ ಪಟ್ಟಿಗೆ ಸೇರಿಸಲಾಗಿದೆ ಎಂದರು. ಈ ನಗರಗಳಿಗೆ 5 ವರ್ಷದ ಅವಧಿಯಲ್ಲಿ ಕೇಂದ್ರ ಸರ್ಕಾರ ರೂ.100 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ ಹೊಂದಾಣಿಕೆ ಅನುದಾನ ರೂಪದಲ್ಲಿ ರೂ.100 ಕೋಟಿ ನೀಡಲಾಗುತ್ತದೆ. ರಾಜ್ಯ ಮಟ್ಟದ ಉನ್ನತ ಸಮಿತಿ ಅನುಮೋದನೆ ನೀಡುತ್ತದೆ ಎಂದು ಹೇಳಿದರು.
ಆವಾಸ ಯೋಜನೆ: ಇದರ ಜತೆಗೆ ಮಧ್ಯಮ ವರ್ಗದವರನ್ನು ಗುರಿಯಾಗಿರಿಸಿಕೊಂಡು ಎಲ್ಲರಿಗೂ ಆವಾಸ ಎಂಬ ಯೋಜನೆಯೂ ಜಾರಿಯಾಗುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ 2 ಲಕ್ಷ ಸಬ್ಸಿಡಿ, ಶೇ.6ರ ಬಡ್ಡಿಯಲ್ಲಿ 2ಲಕ್ಷ ಸಾಲ ನೀಡುತ್ತದೆ. ರಾಜ್ಯ ಸರ್ಕಾರ ಬಸವ ಆವಾಸ ಯೋಜನೆ ಪ್ರಕಾರ ರೂ.1.20 ಲಕ್ಷ ನೆರವು ನೀಡುತ್ತದೆ. ಇದರ ಆಧಾರದ ಮೇಲೆ ರೂ.6 ಲಕ್ಷ ಮೌಲ್ಯದ 8000 ಪ್ಲಾಟ್ ಗಳನ್ನು ನಿರ್ಮಾಣ ಮಾಡಲಾಗುವುದು ಎಂದರು.
ಸ್ಮಾರ್ಟ್ ಸಿಟಿಯಲ್ಲಿ ಏನು ಇರುತ್ತೆ? ನಗರಗಳಿಗೆ ಅಗತ್ಯ ಮೂಲ ಸೌಕರ್ಯ, ಸ್ವಚ್ಛ ಪರಿಸರ, ಸ್ಮಾರ್ಟ್ ಪರಿಹಾರ, ಜನರ ಜೀವನ ಮಟ್ಟ ಸುಧಾರಣೆ, ಆನ್‍ಲೈನ್ ಮೂಲಕ ಸಮಸ್ಯೆಗಳ ಪರಿಹಾರ, ಸುಸಜ್ಜಿತ ಒಳಚರಂಡಿ ವ್ಯವಸ್ಥೆ