ಬೆಂಗಳೂರು: ಗ್ರೀನ್ ವ್ಯೂ ಅಪಾರ್ಟ್ಮೆಂಟ್ ಹಾಗೂ ಭಾರತಿ ಹೌಸಿಂಗ್ ಸೊಸೈಟಿ ನಿರ್ಮಿಸಿದ್ದ ವಸತಿ ಸಂಕೀರ್ಣಗಳಿದ್ದ ಜಾಗ ಸೇರಿದಂತೆ ಒಟ್ಟು ರೂ. 928 ಕೋಟಿ ಮೌಲ್ಯದ 43.7 ಎಕರೆ ಸರ್ಕಾರಿ ಜಮೀನನ್ನು ಜಿಲ್ಲಾಡಳಿತ ಶುಕ್ರವಾರ ವಶಕ್ಕೆ ಪಡೆದಿದೆ. ದಕ್ಷಿಣ ತಾಲೂಕು, ಉತ್ತರಹಳ್ಳಿ ಗ್ರಾಮದ ಸ.ನಂ. 88/1ಎ ರಲ್ಲಿ 900 ಕೋಟಿ ಮೌಲ್ಯದ 18.1 ಎಕರೆ ಜಮೀನನ್ನು ತಹಸೀಲ್ದಾರ್ ಡಾ.ಬಿ.ಆರ್.ದಯಾನಂದ್ ನೇತೃತ್ವದಲ್ಲಿ ತೆರವುಗೊಳಿಸಲಾಯಿತು. ಈ ಪ್ರದೇಶದ ಸುಮಾರು 30 ಗುಂಟೆ ಜಮೀನಿನ ಒಂದು ಭಾಗವನ್ನು `ಗ್ರೀನ್ ವ್ಯೂ ಅಪಾರ್ಟ್‍ಮೆಂಟ್' ಒತ್ತುವರಿ ಮಾಡಿಕೊಂಡಿದ್ದು, ಎರಡು ವಸತಿ ಸಂಕೀರ್ಣ ನಿರ್ಮಿಸಲಾಗಿದೆ. ಇವುಗಳನ್ನು ತೆರವುಗೊಳಿಸಲು ಸೂಚಿಸಲಾಗಿದೆ.
ಮತ್ತೊಂದು ಭಾಗದಲ್ಲಿ 4 ಎಕರೆ ಪ್ರದೇಶವನ್ನು `ಭಾರತಿ ಹೌಸಿಂಗ್ ಸೊಸೈಟಿ' ಒತ್ತುವರಿ ಮಾಡಿಕೊಂಡು `ಲಕ್ಕನಗೌಡ ನಗರ' ಎಂಬ ಬಡಾವಣೆ ನಿರ್ಮಿಸಿ, ನಿವೇಶನ ಹಂಚಿದೆ. ಈ ಬಡಾವಣೆ ವಶಪಡಿಸಿಕೊಂಡು ಸರ್ಕಾರಿ ಭೂಮಿ ಎಂದು ಸೂಚನಾ ಫಲಕ ಅಳವಡಿಸಲಾಗಿದೆ.
ವಸತಿ ಸಂಕೀರ್ಣಗಳ ಹಾಗೂ ಬಡಾವಣೆಗಳ ನಿವಾಸಿಗಳು ಒತ್ತುವರಿ ತೆರವುಗೊಳಿಸದಂತೆ ಮನವಿ ಮಾಡಿಕೊಂಡಾಗ, ನಿವೇಶನದ ದಾಖಲೆಗಳನ್ನು ಬಿಎಂಟಿಎಫ್ ಗೆ ಸಲ್ಲಿಸಿ ನಿವೇಶನ ಮಾಡಿದವರ ವಿರುದ್ದ ದೂರು ದಾಖಲಿಸುವಂತೆ ಸೂಚಿಸಲಾಯಿತು. ಉಳಿದ ಭೂಮಿಯ 6 ಎಕರೆ ಖಾಲಿಯಿರುವುದರಿಂದ ವಾಹನ ನಿಲುಗಡೆಗೆ ಬಳಸಲಾಗುತ್ತಿತ್ತು. ಇಲ್ಲಿ ತಾತ್ಕಾಲಿಕ ಶೆಡ್ ನಿರ್ಮಿಸಿ ವೇಸ್ಟ್ ಪೇಪರ್ ಅಂಗಡಿ, ಗುಜರಿ, ವಾಹನ ರಿಪೇರಿ ಅಂಗಡಿ ನಡೆಸಲಾಗುತ್ತಿತ್ತು. ಜಿಲ್ಲಾಡಳಿತದ ಸೂಚನೆ ಮೇರೆಗೆ ಮಳಿಗೆದಾರರು ತಾವೇ ಮಳಿಗೆತೆರವುಗೊಳಿಸಿದ್ದಾರೆ.
ಉತ್ತರ ತಾಲೂರು ಜಾಲ ಹೋಬಳಿ. ಮರಳುಕುಂಟೆಯಲ್ಲಿ ಸ.ನಂ. 42ರಲ್ಲಿ 1.30 ಎಕರೆ, ಚಾಗಲಹಟ್ಟಿಯ ಸ.ನಂ. 83 ರಲ್ಲಿ 3.12 ಎಕರೆ, ಮಾರೇನಹಳ್ಳಿಯ ಸ.ನಂ. 50ರಲ್ಲಿ 3 ಎಕರೆ ಜಾಗವನ್ನು ತಹಸೀಲ್ದಾರ್ ಬಾಳಪ್ಪ ಹಂದಿಗುಂದ ತಂಡ ತೆರವುಗೊಳಿಸಿತು. ಈ ಜಾಗ ಅಂದಾಜು ರೂ. 10 ಕೋಟಿ ಮೌಲ್ಯ ಹೊಂದಿದೆ. ಪೂರ್ವ ತಾಲೂಕು, ಬಿದರಹಳ್ಳಿ ಹೋಬಳಿ, ಮಂಡೂರು ಗ್ರಾಮದ ಸ.ನಂ. 79 ರಲ್ಲಿ 1.30 ಎಕರೆ, ತಿರುಮೇನಹಳ್ಳಿಯಲ್ಲಿ ಸ.ನಂ 22ರಲ್ಲಿ 10.25 ಎಕರೆ, ಕಗ್ಗದಾಸಪುರದಲ್ಲಿ ಸ.ನಂ 31/1 ರಲ್ಲಿ 8 ಗುಂಟೆ ಜಮೀನನ್ನು ತಹಶೀಲ್ದಾರ್ ಹರೀಶ್ ನಾಯಕ್ ನೇತೃತ್ವದಲ್ಲಿ ವಶಪಡಿಸಿಕೊಳ್ಳಲಾಯಿತು.
ಆನೇಕಲ್ ತಾಲೂಕು, ಕಸಬಾ ಹೋಬಳಿ, ಹೊನ್ನಕಳಸಾಪುರದ ಸ.ನಂ. 33ರಲ್ಲಿ ರೂ .5 ಕೋಟಿ ಮೌಲ್ಯದ 4.18 ಎಕರೆಯನ್ನು ಅನಿಲ್ ಕುಮಾರ್ ತಂಡ ವಶಪಡಿಸಿಕೊಂಡಿದೆ. ದೊಮ್ಮಸಂದ್ರ ಗ್ರಾಪಂ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾಡಿದ್ದ ಮಳಿಗೆಗಳನ್ನು ಪಂಚಾಯ್ತಿ ಅಧ್ಯಕ್ಷ ಬಿ.ಸಿ.ಉಮೇಶ್ ಬಾಬು ಹಾಗೂ ಕಾರ್ಯದರ್ಶಿ ಮಂಜುನಾಥ ರೆಡ್ಡಿ ನೇತೃತ್ವದಲ್ಲಿ ತೆರವು ಮಾಡಲಾಯಿತು.