ಜಿಲ್ಲಾ ಸುದ್ದಿ

ಬಿಬಿಎಂಪಿ ಚುನಾವಣೆ: ಬನ್ನಂಜೆ ರಾಜನ ಕರೆತರುವಲ್ಲಿ ವಿಳಂಬ

Mainashree

ಬೆಂಗಳೂರು: ಉತ್ತರ ಆಫ್ರಿಕಾದ ಮೊರಕ್ಕೋದ ಜೈಲಿನಲ್ಲಿರುವ ಕುಖ್ಯಾತ ಭೂಗತ ಪಾತಕಿ ಬನ್ನಂಜೆ ರಾಜನನ್ನು ಭಾರತಕ್ಕೆ ಕರೆತರುವುದು ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ.

ಕಳೆದ ಶುಕ್ರವಾರವಷ್ಟೇ ಪತ್ರಿಕಾಗೋಷ್ಠಿ ನಡೆಸಿದ್ದ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರು ಒಂದು ವಾರದಲ್ಲೇ ವಿಶೇಷ ತಂಡ ಮೊರಕ್ಕೋಗೆ ತೆರಳಿ ಬನ್ನಂಜೆ ರಾಜನನ್ನು ಭಾರತಕ್ಕೆ ತರಲಾಗುತ್ತದೆ ಎಂದು ಹೇಳಿದ್ದರು. ಹೀಗಾಗಿ, ಈ ವಾರದಲ್ಲೇ ನಗರ ಪಶ್ಚಿಮ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಪ್ರತಾಪ ರೆಡ್ಡಿ ಅವರ ನೇತೃತ್ವದ ತಂಡ ಮೊರಕ್ಕೋಗೆ ತೆರಳಬೇಕಿತ್ತು.

ಆದರೆ, ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಅವರು ಮೊರಕ್ಕೋಗೆ ತೆರಳುವುದು ಸ್ವಲ್ಪ ವಿಳಂಬವಾಗುವ ಸಾಧ್ಯತೆ ಇದೆ. ಈ ಬಗ್ಗೆ ಮಾತನಾಡಿದ ರೆಡ್ಡಿ, ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಕಾನೂನು, ಸುವ್ಯವಸ್ಥೆ ಕರ್ತವ್ಯ ಇರುವ ಕಾರಣ ಕೆಲ ದಿನಗಳ ನಂತರ ಮೊರಕ್ಕೋಗೆ ತೆರಳಬಹುದು. ಎಷ್ಟು ದಿನಗಳು ವಿಳಂಬವಾಗುತ್ತದೆ ಎಂಬುದು ಖಚಿತವಾಗಿ ಹೇಳಲಾಗದು ಎಂದರು.

ರಾಜನ ಬಂಧನ ಹಾಗೂ ಆತನನ್ನು ಭಾರತಕ್ಕೆ ಕರೆತರುವ ಕಾನೂನು ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಅಲ್ಲದೇ, ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಮೊರಕ್ಕೋ ಸರ್ಕಾರ ಅಧಿಕೃತವಾಗಿ ಭಾರತ ಸರ್ಕಾರಕ್ಕೆ ಮಾಹಿತಿ ನೀಡಿದೆ. ಹೀಗಾಗಿ, ಇನ್ನೇನಿದ್ದರೂ ಆರೋಪಿಯನ್ನು ಕರೆತಂದು ದೇಶದಲ್ಲಿರುವ ಪ್ರಕರಣಗಳ ಬಗ್ಗೆ ವಿಚಾರಣೆ ನಡೆಸಲು ನ್ಯಾಯಾಲಯದ ಮುಂದೆ ಹಾಜರುಪಡಿಸಬೇಕಿದೆ.

SCROLL FOR NEXT