ಬೆಂಗಳೂರು: ಲೋಕಾಯುಕ್ತ ಕಚೇರಿ ಲಂಚ ಆರೋಪ ಪ್ರಕರಣದಲ್ಲಿ ಜೈಲಿನಲ್ಲಿರುವ ಲೋಕಾಯುಕ್ತ ಸಂಸ್ಥೆ ಪಿಆರ್ ಒ ಸೈಯ್ಯದ್ ರಿಯಾಜ್ ಹಾಗೂ ಅಶ್ವಿನ್ ರಾವ್ ಊಟ ಹಾಗೂ ವಸತಿ ವಿಚಾರವಾಗಿ ಜೈಲು ಅಧಿಕಾರಿ, ಸಿಬ್ಬಂದಿ ಮೇಲೆ ದರ್ಪ ತೋರಿದ್ದಾರೆ ಎಂದು ತಿಳಿದು ಬಂದಿದೆ.
ಅಶ್ವಿನ್ ರಾವ್ ಪರ ವಕೀಲರು ಜೈಲಿನಲ್ಲಿ ಅಶ್ವಿನ್ ಗೆ ವಿಐಪಿ ಸೌಕರ್ಯ ಕಲ್ಪಿಸುವಂಕೆ ಮನವಿ ಮಾಡಿದ್ದರು. ಆದರೆ ಆ ರೀತಿ ಆದೇಶಿಸಲಾಗದು. ಜೈಲಿನಲ್ಲಿ ಎಲ್ಲರಂತೆ ಇರಬೇಕು ಎಂದು ನ್ಯಾಯಾಧೀಶರು ಹೇಳಿದ್ದರು.
ಆದರೂ ಪಟ್ಟು ಬಿಡದ ಅಶ್ವಿನ್ ಹಾಗೂ ಸೈಯ್ಯದ್ ರಿಯಾಜ್ ತಮಗೆ ವಿಐಪಿ ಆತಿಥ್ಯ ನೀಡುವಂತೆ ಬಲವಂತ ಮಾಡಿ ಜೈಲಿನ ಸಿಬ್ಬಂದಿಗೆ ಆವಾಜ್ ಹಾಕಿದ್ದಾರಂತೆ. ತಮಗೆ ಬೇಕಾದ ಊಟವನ್ನು ತರಿಸಿಕೊಡಬೇಕು. ಹಾಸಿಗೆ ಬಟ್ಟೆ ಎಲ್ಲವೂ ತಮ್ಮ ಆಯ್ಕೆಯಂತೆಯೇ ಇರಬೇಕು ಎಂದು ಹೇಳಿದ್ದಾರಂತೆ. ಆದರೆ ಇವರ ಇಂಥ ಬೇಡಿಕೆಗಳಿಗೆ ಸ್ಪಂದಿಸಲು ನಿರಾಕರಿಸಿದ ಅಧಿಕಾರಿಗಳು ನಿಮ್ಮ ಬೇಡಿಕೆ ಪೂರೈಸಿದರೆ ಬೇರೆ ಕೈದಿಗಳು ಡಿಮ್ಯಾಂಡ್ ಮಾಡುತ್ತಾರೆ ಎಂದು ತಿಳಿ ಹೇಳಿದ್ದಾರೆ. ಇದಕ್ಕೊಪ್ಪದ ಆರೋಪಿಗಳು ನೀವು ನಮ್ಮನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಎಂದು ಆಪಾದಿಸಿ ಸಿಬ್ಬಂದಿಯ ಮೇಲೆ ಮನ ಬಂದಂತೆ ರೇಗಾಡುತ್ತಿದ್ದಾರೆ. ಉತ್ತಮ ಸೇವೆ ಕಲ್ಪಿಸುವಂತೆ ಒತ್ತಡ ಹೇರಿ ಅನಗತ್ಯವಾಗಿ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂದು ಜೈಲು ಮೂಲಗಳಿಂದ ತಿಳಿದು ಬಂದಿದೆ.
ಸೈಯ್ಯದ್ ರಿಯಾಜ್ ವರ್ತನೆಯಿಂದ ಜೈಲಿನ ಸಿಬ್ಬಂದಿ ಅಸಮಾಧಾನಗೊಂಡು ಅವರನ್ನು ಇರಿಸಿರುವ ಸೆಲ್ ಗಳಿಗೆ ಪ್ರತ್ಯೇಕ ಕಾವಲುಗಾರರನ್ನು ನೇಮಿಸಲಾಗಿದೆ ಎಂದು ತಿಳಿದು ಬಂದಿದೆ.