ಜಿಲ್ಲಾ ಸುದ್ದಿ

ರಾವ್ ರಜೆ ವಿಸ್ತರಣೆ: ಅನಿಶ್ಚಿತತೆಯಲ್ಲಿ ಲೋಕಾಯುಕ್ತ ಸಂಸ್ಥೆ

Sumana Upadhyaya

ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ ರಾವ್ ಅವರು ಆಗಸ್ಟ್ 31ರವರೆಗೆ ರಜೆಯನ್ನು ವಿಸ್ತರಿಸಿದ್ದರಿಂದ ಲೋಕಾಯುಕ್ತ ಸಂಸ್ಥೆಯಲ್ಲಿನ ಅನಿಶ್ಚಿತತೆ, ಗೊಂದಲ ಮುಂದುವರಿದಿದೆ.

ಭಾಸ್ಕರ್ ರಾವ್ ಅವರು, ರಜೆ ಮುಗಿಸಿ ನಿನ್ನೆ ಕಚೇರಿಗೆ ಕೆಲಸಕ್ಕೆ ಆಗಮಿಸಬೇಕಾಗಿತ್ತು. ಇಂದು ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ಮಾಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಅಲ್ಲಿನ ಸಿಬ್ಬಂದಿ ಇದ್ದರು. ಆದರೆ ಭಾಸ್ಕರ್ ರಾವ್ ಅವರು ಗುರುವಾರ ಲೋಕಾಯುಕ್ತ ರಿಜಿಸ್ಟ್ರಾರ್ ಎಂ.ಎಸ್.ಬಾಲಕೃಷ್ಣ ಅವರಿಗೆ ರಜೆಯನ್ನು ವಿಸ್ತರಿಸುವುದಾಗಿ ಪತ್ರ ಕಳುಹಿಸಿದ್ದರು. ಕೂಡಲೇ ಬಾಲಕೃಷ್ಣ ಅವರು ರಾಜ್ಯಪಾಲರಿಗೆ ಮತ್ತು ಸರ್ಕಾರಕ್ಕೆ ವಿಷಯ ತಿಳಿಸಿದ್ದರು. ರಾವ್ ಅವರ ಅನುಪಸ್ಥಿತಿಯಲ್ಲಿ ಉಪ ಲೋಕಾಯುಕ್ತ ಸುಭಾಷ್ ಬಿ.ಆದಿ ಧ್ವಜಾರೋಹಣ ನೆರವೇರಿಸಿದರು.

ತಮ್ಮ ಪುತ್ರ ವೈ ಅಶ್ವಿನ್ ನನ್ನು ಕಳೆದ ಜುಲೈ 27ರಂದು ಭ್ರಷ್ಟಾಚಾರ ಮತ್ತು ವಂಚನೆ ಪ್ರಕರಣದಡಿ ಪೊಲೀಸರು ಬಂಧಿಸಿದ ನಂತರ ಭಾಸ್ಕರ್ ರಾವ್ ಅವರು ರಜೆಯ ಮೇಲೆ ತೆರಳಿದ್ದು, ಇದುವರೆಗೆ ಕಚೇರಿಗೆ ಆಗಮಿಸಿಲ್ಲ.

ಈ ಬಗ್ಗೆ ಇಂಡಿಯನ್ ಎಕ್ಸ್ ಪ್ರೆಸ್ ಅವರನ್ನು ಸಂಪರ್ಕಿಸಲು ಯತ್ನಿಸಿದಾಗ, ತಾವು  ಬೇರೆ ಕಡೆ ಇರುವುದಾಗಿ ಮಾತ್ರ ಉತ್ತರಿಸಿದ್ದಾರೆ. ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಅವರ ಪುತ್ರನ ಪ್ರಕರಣದಿಂದ ಮತ್ತು ಅವರು ರಜೆಯ ಮೇಲೆ ತೆರಳಿರುವುದರಿಂದ ಭ್ರಷ್ಟಾಚಾರ ನಿಗ್ರಹ ಕೇಂದ್ರದಲ್ಲಿ ಯಾವುದೇ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ. 80ಕ್ಕೂ ಹೆಚ್ಚು ಪ್ರಕರಣಗಳು ಇತ್ಯರ್ಥವಾಗದೆ ಉಳಿದುಕೊಂಡಿವೆ. ಲೋಕಾಯುಕ್ತ ದಾಳಿ, ಭ್ರಷ್ಟಾಚಾರ ಪತ್ತೆ ಮೊದಲಾದವುಗಳು ನಿಂತುಹೋಗಿವೆ ಎಂದು ಲೋಕಾಯುಕ್ತದಲ್ಲಿನ ನ್ಯಾಯಾಂಗ ಅಧಿಕಾರಿಯೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ವಾರಗಳಿಂದ ಕಚೇರಿಯ ಯಾವುದೇ ಕೆಲಸ ಕಾರ್ಯಗಳು ಸರಿಯಾಗಿ ನಡೆಯುತ್ತಿಲ್ಲ.ಲೋಕಾಯುಕ್ತರ ಅನುಪಸ್ಥಿತಿಯಲ್ಲಿ ಉಪ ಲೋಕಾಯುಕ್ತರು ಅವರ ಕಾರ್ಯ ನಿರ್ವಹಿಸುತ್ತಾರೆ.ಆದರೆ ಭಾಸ್ಕರ ರಾವ್ ಅವರು ರಜೆಯಲ್ಲಿ ಹೋಗಿರುವಾಗ ರಿಜಿಸ್ಟ್ರಾರ್ ಮೂಲಕ ಉಪ ಲೋಕಾಯುಕ್ತರಿಗೆ ಯಾವುದೇ ಸೂಚನೆ ನೀಡಿರಲಿಲ್ಲ ಎಂದೆನಿಸುತ್ತದೆ.ಲೋಕಾಯುಕ್ತದಲ್ಲಿನ ಅನಿಶ್ಚಿತತೆಯನ್ನು ಹೋಗಲಾಡಿಸಲು ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರನ್ನು ಸರ್ಕಾರ ಕೂಡಲೇ ಸ್ಥಾನದಿಂದ ತೆಗೆದುಹಾಕಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ರಾಜ್ಯಾದ್ಯಂತ ಸುದ್ದಿ ಮಾಡಿದ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಅವರ ಪುತ್ರನ ಭ್ರಷ್ಟಾಚಾರ ಪ್ರಕರಣದಿಂದ ಪರಿಹಾರ ಯಾಚಿಸಿ ಲೋಕಾಯುಕ್ತ ಕಚೇರಿಗೆ ಬರುವವರ ಸಂಖ್ಯೆ ಕೂಡ ಕಡಿಮೆಯಾಗಿದೆ. ಹಿಂದೆ ಪ್ರತಿದಿನ ಸುಮಾರು 25ರಿಂದ 30 ದೂರುಗಳು ಬರುತ್ತಿದ್ದವು. ಆದರೀಗ ಅದು 10ರಿಂದ 20ಕ್ಕೆ ಇಳಿದಿವೆ ಎನ್ನುತ್ತಾರೆ ಅವರು.

SCROLL FOR NEXT