ಜಿಲ್ಲಾ ಸುದ್ದಿ

ಬಿಬಿಎಂಪಿ ಚುನಾವಣೆ: ಸೀರೆ ಹಂಚಿದ್ದಕ್ಕೆ ಮಾರಾಮಾರಿ

Srinivasamurthy VN

ಬೆಂಗಳೂರು: ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಸೀರೆ ಹಂಚುವ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ.

25ನೇ ವಾರ್ಡ್ ಹೊರಮಾವುನಿಂದ ಸ್ಪರ್ಧಿಸಿರುವ ಬಿಜೆಪಿ ಅಭ್ಯರ್ಥಿ ಭಾರತಿ ಅವರ ಪತಿ ಮುನಿರಾಜು ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ. ಬುಧವಾರ ರಾತ್ರಿ ಬಾಬುಸಾಬ್ ಪಾಳ್ಯದಲ್ಲಿ ಘಟನೆ ನಡೆದಿದೆ. ಮುನಿರಾಜು ಹೆಣ್ಣೂರು ಠಾಣೆಯಲ್ಲಿ ದೂರು ದಾಖಲಿಸಲು ಮುಂದಾದರೂ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದಾರೆ. ಹಾಗಾಗಿ ಗುರುವಾರ ಬೆಳಗ್ಗೆ ಪೊಲೀಸರ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ನಂತರವಷ್ಟೇ ಪೊಲೀಸರು ದೂರುದಾರರಿಗೆ ರಸೀದಿ ನೀಡಿ ಕಳುಹಿಸಿದ್ದಾರೆ. ಆದರೆ, ಎಫ್ಐಆರ್ ದಾಖಲಿಸಿಲ್ಲ.

ರಾತ್ರಿ ಹಲ್ಲೆ:
ಬುಧವಾರ ರಾತ್ರಿ ಸುಮಾರು 11.30ರ ವೇಳೆ ಕಾಂಗ್ರೆಸ್ ಅಭ್ಯರ್ಥಿ ರಾಧಾ ವೆಂಕಟೇಶ್ ಅವರ ಪರ ಕಾರ್ಯಕರ್ತರು ಬಾಬುಸಾಬ್ ಪಾಳ್ಯದಲ್ಲಿ ಸೀರೆ ಹಂಚುತ್ತಿದ್ದರು. ಅದನ್ನು ತಿಳಿದ ಬಿಜೆಪಿ ಕಾರ್ಯಕರ್ತರು ಅಲ್ಲಿನ ಬಿಜೆಪಿ ಅಭ್ಯರ್ಥಿ ಭಾರತಿ ಮುನಿರಾಜು ಅವರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಮುನಿರಾಜು ಸೀರೆ ಹಂಚುತ್ತಿದ್ದ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಮುನಿರಾಜು ಮೇಲೆ ಕಾಂಗ್ರೆಸ್‍ನವರು ಹಲ್ಲೆ ಮಾಡಿದ್ದಾರೆ.

ಕಾರ್ಯಕರ್ತರ ಮಾರಾಮಾರಿ: ಚುನಾವಣಾ ಪ್ರಚಾರ ಸಂಬಂಧ ರಾಜಗೋಪಾಲನಗರದ ರಾಜೇಶ್ವರಿ ನಗರದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದಿದೆ. ಬುಧವಾರ ರಾತ್ರಿ ಘಟನೆ ನಡೆದಿದ್ದು, ಜೆಡಿಎಸ್ ಅಭ್ಯರ್ಥಿ(ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡ್ 41) ಲತಾ ಅವರ ಪತಿ, ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಸಿ.ಜೆ. ರಮೇಶ್ ಹಾಗೂ ಸಹೋದರ ಗೋಪಾಲ್ ಹಲ್ಲೆಗೊಳಗಾದವರು. ರಾಜಗೋಪಾಲನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಲಗ್ಗೆರೆಯ ನರಸಿಂಹಮೂತಿರ್ , ಚೇತನ್ ಹಾಗೂ ದೇವೇಗೌಡ ಎಂಬುವವರನ್ನು ಬಂಧಿಸಲಾಗಿದೆ. ಪ್ರಾಣಾಪಾಯವಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

SCROLL FOR NEXT