ಬೆಂಗಳೂರು:ರಾಮಕಥಾ ಗಾಯಕಿ ಮೇಲೆ ಅತ್ಯಾಚಾರ ಆರೋಪ ಎದುರಿಸುತ್ತಿರುವ ಹೊಸನಗರ ರಾಘವೇಶ್ವರ ಸ್ವಾಮಿ ವಿರುದ್ಧ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ಮತ್ತೊಂದು ದೂರು ನೀಡಲಾಗಿದೆ.ಈ ಸಂಬಂಧ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಮೂಲದ 25 ವರ್ಷದ ಮಹಿಳೆ ಶನಿವಾರ ಸಂಜೆ ಜನವಾದಿ ಮಹಿಳಾ ಸಂಘಟನೆ ನೆರವಿನೊಂದಿಗೆ ಗಿರಿನಗರ ಠಾಣೆಗೆ ತೆರಳಿ ಅತ್ಯಾಚಾರ, ಲೈಂಗಿಕ ದೌರ್ಜನ್ಯ ದೂರು ನೀಡಿದ್ದಾರೆ. ಸ್ವಾಮಿ 2006ರಿಂದ 2012ರವರೆಗೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ವಿಷಯ ಯಾರಿಗಾದರೂ ಹೇಳಿದರೆ ರಾಮದೇವರ ಶಾಪ ತಟ್ಟುತ್ತದೆ. ನೀನು
ನಾಶವಾಗುತ್ತಿಯಾ ಎಂದು ಬೆದರಿಕೆ ಹಾಕಿದ್ದರಿಂದ ಯುವತಿ ಹೆದರಿ ದೂರು ನೀಡಿರಲಿಲ್ಲ ಎಂದು ಜನವಾದಿ ಮಹಿಳಾ ಸಂಘಟನೆ ಅಧ್ಯಕ್ಷೆ ವಿಮಲಾ ತಿಳಿಸಿದರು.
ನೊಂದ ಮಹಿಳೆ ರಾಘವೇಶ್ವರ ಸ್ವಾಮಿಯವರಿಗೆ ಸೇರಿದ ಹಾಸ್ಟೆಲ್‍ನಲ್ಲಿ ಉಳಿದುಕೊಂಡು ಮಠಕ್ಕೆ ಸೇರಿದ ಶಾಲೆಯಲ್ಲೇ ವ್ಯಾಸಂಗ ಮಾಡಿದ್ದಾರೆ. ವ್ಯಾಸಂಗ ಮುಗಿದ ನಂತರ ಯುವತಿಗೆ ಮಠದವರೇ ವಿವಾಹ ಮಾಡಿಸಿದ್ದರು. ಆದರೆ, ಕೆಲ ವರ್ಷಗಳಲ್ಲೇ ಈ ವಿವಾಹ
ಮುರಿದು ಬಿದ್ದಿದೆ. ಈ ಅವಧಿಯುದ್ದಕ್ಕೂ ಸ್ವಾಮಿ ಮಹಿಳೆಗೆ ಕಿರುಕುಳ ನೀಡಿದ್ದಾರೆ. ಆದರೆ ತಮ್ಮದೇ ಸಮುದಾಯದ ಸ್ವಾಮಿಯ ವಿರುದ್ಧ ದನಿ ಎತ್ತಲು ಸಾಧ್ಯವಾಗದೆ ಮಹಿಳೆ ಈ ದೌರ್ಜನ್ಯವನ್ನು ಸಹಿಸಿಕೊಂಡು ಬರುತ್ತಿದ್ದಳು ಎಂದು ವಿಮಲಾ ಹೇಳಿದರು.
ಲೈಂಗಿಕ ದೌರ್ಜನ್ಯದಿಂದ ಈ ಮಹಿಳೆ ಮಾನಸಿಕವಾಗಿ ನೊಂದು, ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಳು. ಇತ್ತೀಚೆಗೆ ಆಕೆಗೆ ಘಟನೆಯಿಂದ ಹೊರಬರಲಾಗದೆ ನಮ್ಮ ಸಂಘಟನೆಯ ನೆರವು ಕೇಳಿಕೊಂಡು ಬಂದಿದ್ದಳು.ಹೀಗಾಗಿ ನಾವು ರಾಜ್ಯ ಮಹಿಳಾ ಆಯೋಗಕ್ಕೆ ವಿಷಯ ತಿಳಿಸಿ ದೂರು ನೀಡುವ ಬಗ್ಗೆ ಸಲಹೆ ಕೋರಿದ್ದೆವು. ಅವರ ಒಪ್ಪಿಗೆ ಹಾಗೂ ಬೆಂಬಲ ಇದೆ ಎಂದು ಆಯೋಗ ಹೇಳಿದ ನಂತರ ದೂರು ನೀಡಿದ್ದಾಗಿ ವಿವರಿಸಿದರು.
ರಾಘವೇಶ್ವರ ಶ್ರೀ ವಿರುದ್ಧ ರಾಮನ ಹೆಸರಲ್ಲಿ ಬೆದರಿಕೆ!
ಪೊಲೀಸರಿಗೆ ದೂರು ನೀಡಿದರೆ ನೀನು ನಾಶವಾಗುತ್ತಿಯಾ ಎಂದು ಶ್ರೀಗಳು ಹೆದರಿಸುತ್ತಿದ್ದರು. ಹೀಗಾಗಿ, ಯುವತಿ ತನ್ನ ಸಂಕಷ್ಟವನ್ನು ಯಾರ ಬಳಿಯೂ ಹೇಳಿಕೊಂಡಿರಲಿಲ್ಲ. ಸ್ವತಃ ತನ್ನ ತಂದೆ-ತಾಯಿಗೂ ಹೇಳದೇ ಮುಚ್ಚಿಟ್ಟುಕೊಂಡಿದ್ದಳು. ಆದರೆ, ತನಗೆ ಆಪ್ತರಾಗಿದ್ದವರ ಬಳಿ ಹೇಳಿಕೊಂಡಿದ್ದಳು. ಆದರೆ, ಪೊಲೀಸ್ ಠಾಣೆಗೆ ದೂರು ನೀಡುವ ಧೈರ್ಯ ಮಾಡಿರಲಿಲ್ಲ ಎಂದು ಜನವಾದಿ ಮಹಿಳಾ ಸಂಘಟನೆಯ ವಿಮಲಾ ಹೇಳಿದರು.
ಎಫ್ಐಆರ್ ದಾಖಲಾಗುತ್ತಿದ್ದಂತೆ ಆರೋಪಿ ಎಷ್ಟೇ ಪ್ರಭಾವಿಯಾಗಿದ್ದರೂ ಬಂಧಿಸಿ ನ್ಯಾಯಾಲಯದ ಮುಂದೆ ತಂದು ನಿಲ್ಲಿಸಬೇಕು. ನೊಂದ ಯುವತಿಗೆ ನ್ಯಾಯ ಕೊಡಿಸಲು ಸಂಘಟನೆ ಹೋರಾಡುತ್ತದೆ.
●ವಿಮಲಾ, ಅಧ್ಯಕ್ಷೆ, ಜನವಾದಿ ಮಹಿಳಾ ಸಂಘಟನೆ
ಮಹಿಳೆ ದೂರಿನ ಅನ್ವಯ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ. ದೂರಿಗೆ ಸಂಬಂಧಿಸಿದಂತೆ ಅವರಿಂದ ಮಾಹಿತಿ ಕೋರಲಾಗಿದ್ದು ತನಿಖೆ ಮುಂದುವರೆದಿದೆ.
●ಲೋಕೇಶ್ ಕುಮಾರ್ ಡಿಸಿಪಿ ದಕ್ಷಿಣ ವಿಭಾಗ
ಸ್ವಾಮೀಜಿಗಳ ವಿರುದ್ಧ ಷಡ್ಯಂತ್ರ
ರಾಮಚಂದ್ರಾಪುರ ಮಠ ಸ್ಪಷ್ಟನೆ ಬೆಂಗಳೂರು: ರಾಘವೇಶ್ವರ ಸ್ವಾಮಿ ವಿರುದ್ಧ ಮಹಿಳೆ ಅತ್ಯಾಚಾರ ಆರೋಪ ಮಾಡುತ್ತಿರುವುದು ಅವರ ವಿರುದ್ಧ ಮಾಡುತ್ತಿರುವ ಷಡ್ಯಂತ್ರದ ಮುಂದುವರೆದ ಭಾಗ ಎಂದು ರಾಮಚಂದ್ರಾಪುರ ಮಠ ಶನಿವಾರ ಬಿಡುಗಡೆ ಮಾಡಿರುವ
ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದೆ. ಕಳೆದ ವರ್ಷವೂ ಚಾತುರ್ಮಾಸ್ಯ ಸಂದರ್ಭದಲ್ಲೇ ಒಂದು ದೂರು ನೀಡಲಾಗಿತ್ತು. ಈಗ ಮತ್ತೆ ಚಾತುರ್ಮಾಸ್ಯ ವೃತವನ್ನು ಭಂಗ ಮಾಡಿ, ದುರುದ್ದೇಶ ಸಾಧಿಸಲು ಸುಳ್ಳು ದೂರು ನೀಡಲಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ
ತಿಳಿಸಲಾಗಿದೆ.