ಜಿಲ್ಲಾ ಸುದ್ದಿ

ಇಎಸ್‌ಐ ಕಾರ್ಡ್‌ದಾರರಿಗೆ ಉಚಿತ ಚಿಕಿತ್ಸೆ ಭಾಗ್ಯ ಇಲ್ಲ

Vishwanath S
ಬೆಂಗಳೂರು: ನೀವು ಇಎಸ್‌ಐ ಕಾರ್ಡ್ ಹೊಂದಿದ್ದರೆ ಇನ್ನು ಮುಂದೆ ನಿಮಗೆ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಮರೀಚಿಕೆ. ಹೌದು. ಸೆಪ್ಟೆಂಬರ್ 1ರಿಂದ ರಾಜ್ಯದ 40ಕ್ಕೂ ಹೆಚ್ಚು ಸೂಪರ್ ಸ್ಪೇಷಾಲಿಟಿ ಖಾಸಗಿ ಆಸ್ಪತ್ರೆಗಳು ಇಎಸ್‌ಐ ಚೀಟಿ ಹೊಂದಿರುವ ಬಡ ಕಾರ್ಮಿಕರಿಗೆ ಉಚಿತ ಚಿಕಿತ್ಸೆ ನೀಡದಿರಲು ನಿರ್ಧರಿಸಿವೆ. 
ಈ ಬಗ್ಗೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅಸೋಸಿಯೇಶನ್ ಆಫ್ ಹೆಲ್ತ್‍ಕೇರ್ ಪ್ರೊವೈಡರ್ಸ್ ಇಂಡಿಯಾ ಸದಸ್ಯ ಡಾ.ಅಲೆಕ್ಸ್, ನೌಕರರ ರಾಜ್ಯ ವಿಮಾ ನಿಗಮ (ಇಎಸ್‌ಐಸಿ) ಕಳೆದ ಎರಡು ವರ್ಷಗಳಿಂದ ಆಸ್ಪತ್ರೆಗಳಿಗೆ ನೀಡ ಬೇಕಿದ್ದ ನೂರಾರು ಕೋಟಿ ಇಎಸ್‌ಐ ಹಣ ಬಾಕಿ ಉಳಿಸಿಕೊಂಡಿದೆ. ಹಾಗಾಗಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗಳಲ್ಲಿ ಇಎಸ್‌ಐ ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡದಿರಲು ಅಸೋಸಿಯೇಶನ್ ತೀರ್ಮಾನಿಸಿದೆ ಎಂದರು.
ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಡಿ ರಿಯಾಯಿತಿ ದರ ದಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಈ ವೆಚ್ಚವನ್ನು ನೌಕರರ ರಾಜ್ಯ ವಿಮಾ ನಿಗಮ ಪ್ರತಿ ತಿಂಗಳು ಆಸ್ಪತ್ರೆಗಳಿಗೆ ಪಾವತಿಸ ಬೇಕು. ಆದರೆ, ಒಂದು ವರ್ಷದಿಂದ ಈ ಆಸ್ಪತ್ರೆಗಳಿಗೆ ಇಎಸ್‌ಐಸಿ ರು.100 ಕೋಟಿಗೂ ಹೆಚ್ಚು ಹಣ ಬಾಕಿ ಉಳಿಸಿಕೊಂಡಿದೆ ಎಂದು ಅವರು ಆರೋಪಿಸಿದರು.
ವಿಮೆ ಹಣ ಬಾಕಿ ಇರುವ ಕಾರಣ, ಆರೋಗ್ಯ ವಿಮೆ ಹೊಂದಿರುವ ರೋಗಿಗಳು ಚಿಕಿತ್ಸೆಗೆ ತಗಲುವ ಚಿಕಿತ್ಸಾ ವೆಚ್ಚ ಪಾವತಿಸಿದರೆ ಮಾತ್ರ ಚಿಕಿತ್ಸೆ ನೀಡಲಾಗುತ್ತದೆ. ಬಳಿಕ ರೋಗಿಗಳು ಇಎಸ್ಐಸಿಗೆ ಕ್ಲೈಮ್ ಮಾಡಿಕೊಂಡು ಹಣ ಪಡೆಯಬಹುದು ಎಂದು ಸಲಹೆ ನೀಡಿದರು. 
SCROLL FOR NEXT