ಜಿಲ್ಲಾ ಸುದ್ದಿ

ನರಹಳ್ಳಿಯವರದು ಕಲಬುರ್ಗಿಗೆ ಕೊನೆ ಕರೆ!

Sumana Upadhyaya

ಬೆಂಗಳೂರು: ಧಾರವಾಡದಲ್ಲಿ ಭಾನುವಾರ ಬೆಳಿಗ್ಗೆ ಅಪರಿಚಿತರ ಗುಂಡೇಟಿಗೆ  ಬಲಿಯಾಗಿರುವ ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರಿಗೆ ವಿಮರ್ಶಕ  ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರದ್ದು ಕೊನೆಯ ಕರೆ.

ನರಹಳ್ಳಿ ಹಾಗೂ ಕಲಬುರ್ಗಿ ಇಬ್ಬರೂ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರು. ಅಕಾಡೆಮಿಯಲ್ಲಿ ಆಗಬೇಕಾದ ಕೆಲಸಗಳು, ಯೋಜನೆಗಳ ಬಗ್ಗೆ ಚರ್ಚಿಸಲು ನರಹಳ್ಳಿಯವರು ಕಲಬುರ್ಗಿ ಅವರಿಗೆ ಭಾನುವಾರ ಬೆಳಗ್ಗೆ ಕರೆ ಮಾಡಿದ್ದರು. ಬಹುಶಃ ಅದೇ ಕೊನೆಯ ಕರೆ.

ಈ ಬಗ್ಗೆ  ಮಾತನಾಡಿದ ನರಹಳ್ಳಿಯವರು, ಕೇಂದ್ರ ಸಾಹಿತ್ಯ ಅಕಾಡೆಮಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಚರ್ಚಿಸಲು ಬೆಳಗ್ಗೆ ಸುಮಾರು 8.33ರ ವೇಳೆಗೆ ಕಲಬುರ್ಗಿ ಅವರಿಗೆ ಕರೆ ಮಾಡಿದ್ದೆ. ಕೆಲ ಯೋಜನೆಗಳನ್ನು ಕುರಿತು ಸುಮಾರು ಆರೇಳು ನಿಮಿಷ ಚರ್ಚೆ ನಡೆಸಿದೆವು. ಆಗ ಅವರಲ್ಲಿ ಯಾವುದೇ ರೀತಿಯ ಅಸಮಾಧಾನ, ದುಗುಡ ಕಂಡುಬಂದಿರಲಿಲ್ಲ.
ಎಂದಿನಂತೆ ಸಹಜವಾಗಿಯೇ ಮಾತನಾಡಿದರು. ಅದಾದ ಕೆಲವೇ ನಿಮಿಷಗಳಲ್ಲಿ ಅಂದರೆ,
ಸುಮಾರು 8.45ರ ವೇಳೆಗೆ ಅವರ ಸಾವಿನ ಸುದ್ದಿ ತಿಳಿಯಿತು. ನಿಜಕ್ಕೂ ಇದು ಆಘಾತಕಾರಿ ವಿಷಯ ಎಂದು ತಮ್ಮ ಅನುಭವ ಹಂಚಿಕೊಂಡರು.

ಯಾವುದೇ ವಿಷಯವನ್ನು ನೇರವಾಗಿ ಹೇಳುವ ಸ್ವಭಾವ ಹೊಂದಿದ್ದವರು. ಅವರ ಸ್ಥಿತಿ ಗಮನಿಸಿದರೆ ಪ್ರಜಾಪ್ರಭುತ್ವದಲ್ಲಿ ಸಾಹಿತಿಗಳ ಕಗ್ಗೊಲೆ ಯಾದಂತೆ. ಅಭಿಪ್ರಾಯ  ವ್ಯಕ್ತಪಡಿಸಿದರೆ ಅದಕ್ಕೆ ಗುಂಡಿನ ಮೂಲಕ ಉತ್ತರ ಸಿಗುತ್ತದೆ ಎಂದರೆ ನಾವು ಎಂತಹ ಸಮಾಜದಲ್ಲಿ ಬದುಕುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಘಟನೆಗೆ ಕಾರಣ ತಿಳಿದಿಲ್ಲ. ಕೌಟುಂಬಿಕ ಸಮಸ್ಯೆ ಇರಲಿಲ್ಲ ಎಂಬುದು ಮೇಲ್ನೋಟಕ್ಕೆ  ತಿಳಿದಿದೆ. ಬೆದರಿಕೆ ಇದ್ದ ಕಾರಣ ರಕ್ಷಣೆ ಕೇಳಿದ್ದರು. ಪೊಲೀಸರು ರಕ್ಷಣೆ ಒದಗಿಸಿದ್ದ ಬಗ್ಗೆ ಮಾಹಿತಿ ಇಲ್ಲ. ಆದರೆ, ಭಾರತೀಯ ಇತಿಹಾಸದಲ್ಲಿ ಇದು ಕರಾಳ ದಿನ. ಈ ವಿಷಯವನ್ನು ರಾಷ್ಟ್ರಮಟ್ಟದಲ್ಲಿ ಕೊಂಡೊಯ್ಯಲು ಪ್ರಯತ್ನಿಸಲಾಗುವುದು.ಕೇಂದ್ರ ಹಾಗೂ ರಾಜ್ಯ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಇದು ಕಲಬುರ್ಗಿ ಅವರ ಹತ್ಯೆಯಲ್ಲ, ಪ್ರಜಾಪ್ರಭುತ್ವದ ಕೊಲೆ. ಈ ಸಂಬಂಧ ಕೇಂದ್ರ ಸಾಹಿತ್ಯ ಅಕಾಡೆಮಿಯ ಎಲ್ಲಾ ಲೇಖಕರ ಜತೆ ಚರ್ಚಿಸಿ ನ್ಯಾಯ ಕಲ್ಪಿಸಲು ಪ್ರಯತ್ನಿಸುತ್ತೇವೆ. ವೈಯಕ್ತಿಕ ಕಾರಣವಾದರೆ ತಾವೇನು ಮಾಡಲು ಸಾಧ್ಯವಿಲ್ಲ ಎಂದರು.

ಪೊಲೀಸರ ವಿಚಾರಣೆ
ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಸಂಶೋಧಕ ಎಂ.ಎಂ.ಕಲಬುರ್ಗಿ
ಅವರಿಗೆ ಕೊನೆಯ ಕರೆ ಮಾಡಿದ್ದರು. ಈ ಸುದ್ದಿ ತಿಳಿದ ಪೊಲೀಸರು ನರಹಳ್ಳಿ ಅವರಿಗೆ ಕರೆ ಮಾಡಿ ಅವರು ನಡೆಸಿದ ಸಂಭಾಷಣೆ, ಎಷ್ಟು ನಿಮಿಷಗಳ ಕಾಲ ಸಂಭಾಷಣೆ ನಡೆಸಿದರು. ಈ ವೇಳೆ ಅವರ ವರ್ತನೆ ಹೇಗಿತ್ತು. ಧ್ವನಿ ಹೇಗಿತ್ತು, ಗುಂಡಿನ ಸದ್ದು ಕೇಳಿಸಿತೇ ಎಂಬಿತ್ಯಾದಿ ಮಾಹಿತಿ ಪಡೆದಿದ್ದಾರೆ.

SCROLL FOR NEXT