ಬೆಂಗಳೂರು: ಕಲಾವಿದರು ಮತ್ತು ಕಲಾಸಕ್ತರ ನಡುವಿನ ಬಾಂಧವ್ಯ ವೃದ್ಧಿಸುವ `ಚಿತ್ರಸಂತೆ' ಪ್ರತಿ ವರ್ಷದಂತೆ ಈ ವರ್ಷವೂ ಜನವರಿ ಮೊದಲ ವಾರದಲ್ಲಿ ನಡೆಯಲಿದೆ.
ಕರ್ನಾಟಕ ಚಿತ್ರಕಲಾ ಪರಿಷತ್ತು `ಎಲ್ಲರಿ ಗಾಗಿ ಕಲೆ' ಎಂಬ ಉದ್ದೇಶದಿಂದ ನಗರದಲ್ಲಿ ರಾಷ್ಟ್ರೀಯ ಮಟ್ಟದ `ಚಿತ್ರಸಂತೆಯನ್ನು ಆಯೋಜಿಸುತ್ತಿದ್ದು, ಕುಮಾರಕೃಪಾ ರಸ್ತೆಯಲ್ಲಿ ನಡೆಯಲಿರುವ 13ನೇ ವಾರ್ಷಿಕ ಚಿತ್ರಸಂತೆಯನ್ನು ಮುಂಬರುವ ಜ.3ರಂದು ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸಿದ್ದು, ಸಂತೆಯಲ್ಲಿ ಭಾಗವಹಿಸುವ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ನೋಂದಣಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.
ಕಳೆದ ವರ್ಷ ಗುಣಮಟ್ಟದ ಚಿತ್ರಗಳಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿತ್ತು. ಅದೇ ರೀತಿ ಈ ವರ್ಷವೂ ಗುಣಮಟ್ಟದ ಚಿತ್ರಗಳಿಗೆ ಪ್ರವೇಶ ನೀಡಲು ಪರಿಷತ್ತು ನಿರ್ಧರಿಸಿದೆ. ಸಾರ್ವಜನಿಕರು ನಿರ್ಭೀತಿಯಿಂದ ಚಿತ್ರಗಳನ್ನು ಖರೀದಿಸಬಹುದು.ಕರ್ನಾಟಕದ ಕಲಾವಿದರ ಜತೆಗೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಎಲ್ಲ ಭಾಗಗಳಿಂದಲೂ ಕಲಾವಿದರು ಭಾಗವಹಿಸಲಿದ್ದು, ಸಾರ್ವಜನಿಕರು ತಮಗೆ ಬೇಕಾದ ಚಿತ್ರಗಳನ್ನು ಖರೀದಿಸಬಹುದು. ಜತೆಗೆ ಚಿತ್ರ ಬಿಡಿಸುವ ಕಲಾಸಕ್ತರು ಚಿತ್ರ ಬಿಡಿಸಲು ಬೇಕಾದ ಪರಿಕರಗಳನ್ನು ಖರೀದಿಸಲು ಕೂಡ ಇದೊಂದು ಉತ್ತಮ ವೇದಿಕೆಯಾಗಲಿದೆ.
ನಾನಾ ವೇದಿಕೆಗಳಡಿ ನಿತ್ಯ ಚಿತ್ರಕಲಾ ಪ್ರದರ್ಶನಗಳು ನಡೆಯುತ್ತಿದ್ದರೂ ಹಲವು ಪ್ರತಿಭಾವಂತರಿಗೆ ವೇದಿಕೆ ಸಿಕ್ಕಿರುವುದಿಲ್ಲ. ಇಂತಹ ಕಲಾವಿದರಿಗಾಗಿಯೇ `ಚಿತ್ರಸಂತೆ'ಯ ಮೂಲಕ ವೇದಿಕೆ ಕಲ್ಪಿಸಲು ಪರಿಷತ್ ಕಳೆದ 12 ವರ್ಷಗಳಿಂದ ಸತತವಾಗಿ ಚಿತ್ರಸಂತೆ ಯನ್ನು ಆಯೋಜಿಸುತ್ತಾ ಬಂದಿದೆ. ಕಲಾವಿದರಿಗೆ ಮಾತ್ರವಲ್ಲ, ಈ ಮೂಲಕ ಕಲಾಸಕ್ತರು ತಮಗಿಷ್ಟವಾದ ಚಿತ್ರಗಳನ್ನು ಖರೀದಿಸಲು ಕೂಡ ಈ ಸಂತೆ ಒಂದು ಉತ್ತಮ ವೇದಿಕೆ ಇದಾಗಿದೆ. ಅಂದಹಾಗೆ ಅಲ್ಲಿ ಪ್ರದರ್ಶನಕ್ಕಿಟ್ಟಿರುವ ಚಿತ್ರಗಳಷ್ಟೇ ಅಲ್ಲ, ಸ್ಥಳದಲ್ಲಿಯೇ ತಮಗೆ ಬೇಕಾದ ಚಿತ್ರವನ್ನು ಕಲಾವಿದರಿಂದ ಚಿತ್ರಿಸಿಕೊಂಡು ಖರೀದಿಸಿ ಮನೆಗೊಯ್ಯುವ ಅವಕಾಶವಿದೆ ಎನ್ನುತ್ತಾರೆ ಪರಿಷತ್‍ನ ಹೆಸರು ಹೇಳಲಿಚ್ಛಿಸದ ಪ್ರತಿನಿಧಿಯೊಬ್ಬರು.
ಎಂದಿನಂತೆ ಈ ಬಾರಿಯೂ ಚಿತ್ರಸಂತೆ ನಡೆಯುವ ಕುಮಾರಕೃಪಾ ರಸ್ತೆಯ ಪ್ರಮುಖ ತಾಣಗಳಲ್ಲಿ ಸಿಸಿ ಟಿವಿಗಳನ್ನು ಅಳವಡಿಸುವುದು, ಸೂಕ್ತ ಪೊಲೀಸ್ ಭದ್ರತೆ ಹಾಗೂ ಕಲಾವಿದರಿಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ಚಿತ್ರಸಂತೆ ನಡೆಸಲಾಗುವುದು ಎಂದರು.