ಜಿಲ್ಲಾ ಸುದ್ದಿ

ಏಕರೂಪದ ಬೆಂಬಲ ಬೆಲೆ ಘೋಷಿಸಬೇಕು

Manjula VN

ಬೆಂಗಳೂರು: ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ರು.10 ಲಕ್ಷ ಪರಿಹಾರ, ಸಣ್ಣ ಮತ್ತು ಮಧ್ಯಮ ಪ್ರಮಾಣದ ರೈತರಿಗೆ ರು.2 ಲಕ್ಷದವರೆಗೆ ಸಾಲ ಮನ್ನಾ, ಏಕರೂಪದ ಬೆಂಬಲ ಬೆಲೆ ಘೋಷಣೆಯಿಂದ ಆತ್ಮಹತ್ಯೆ ಪ್ರಮಾಣ ತಗ್ಗಿಸಲು ಸಾಧ್ಯ ಎಂದು ಬೆಂಗಳೂರಿನಲ್ಲಿ ಗುರುವಾರ ಜರುಗಿದ ಜಾತ್ಯತೀತ ಜನತಾದಳದ ಕಾರ್ಯಕಾರಿಣಿ ಸಭೆ ನಿರ್ಣಯ ಕೈಗೊಂಡಿದೆ.

ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಆತ್ಮಹತ್ಯೆ ಪ್ರಕರಣಗಳನ್ನು ಕಡಿಮೆಮಾಡಲು ಸರ್ಕಾರ ಬಡ್ಡಿ ರಹಿತ ಬೆಳೆ ಸಾಲ, ಕೃಷಿ ಉತ್ಪನ್ನಗಳ ಮೇಲೆ ರು.2 ಲಕ್ಷದವರೆಗೆ ಸಾಲ ವಿತರಣೆ, ಕಡ್ಡಾಯ ಬೆಳೆ ವಿಮೆ, ನೀರಾವರಿ ಯೋಜನೆಗಳ ನಿಗದಿ, ಎರಡು ವರ್ಷ ಅವಧಿಗೆ ಅಲ್ಪಾವಧಿ ಸಾಲ ಮತ್ತು ದೇಶಾದ್ಯಂತ ಕಬ್ಬಿನ ಕಾರ್ಖಾನೆಗಳು ಹೊಂದಾಣಿಕೆಯಿಂದ ರೈತರಿಗೆ ಬಾಕಿ ಹಣ ಪಾವತಿ ಮಾಡಬೇಕೆಂದು ಒತ್ತಾಯಿಸಿದರು.

ಕಳೆದ 2-3 ವರ್ಷಗಳಿಂದ ಆತ್ಮಹತ್ಯೆ ಪ್ರಕರಣಗಳು ಹೆಚ್ಚಳವಾಗುತ್ತಿವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆತ್ಮಹತ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಕಳೆದ ಏಪ್ರಿಲ್ ನಿಂದ ಈವರೆಗೆ ದೇಶದಲ್ಲಿ 5,400 ಹಾಗೂ ರಾಜ್ಯದಲ್ಲಿ 850 ರೈತರು ಆತ್ಮಹತ್ಯೆಗೆ ಕೊರಳೊಡ್ಡಿದ್ದಾರೆ. ಹಿಂದೆಂದೂ ಕಾಣದ ಅಮಾನವೀಯ ಘಟನೆ ದೇಶದಲ್ಲಿ ನಡೆಯುತ್ತಿರುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿರ್ಲಕ್ಷ್ಯವೇ ಕಾರಣ ಎಂದರು.

ಕೃಷಿ ವಿರೋಧಿ
ಜೆಡಿಎಸ್ ರಾಜ್ಯ ಪ್ರವಾಸ ಮಾಡಿದ್ದು, ಆತ್ಮಹತ್ಯೆಗೆ ಗುರಿಯಾಗ 320 ರೈತರ ಕುಟುಂಬಗಳಿಗೆ ತಲಾ ರು.50 ಸಾವಿರ ವಿತರಣೆ ಮಾಡಲಾಗಿದೆ. ಆದರೆ, ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ರೈತರನ್ನು ಕಡೆಗಣಿಸಿವೆ. ಕೇಂದ್ರ ಸರ್ಕಾರ ತನ್ನ ಜವಾಬ್ದಾರಿಯಿಂದ ಜಾರಿಕೊಳ್ಳುತ್ತಿದ್ದರೂ ರೈತರ ಆತ್ಮಹತ್ಯೆ ಕುರಿತ ಅಂಕಿಅಂಶಗಳು ಮತ್ತು ಕಾನೂನಿನಿಂದ ನುಣಿಚಿಕೊಳ್ಳಲು ಸಾಧ್ಯವಿಲ್ಲ. ವಿದೇಶಿ ಹೂಡಿಕೆ ಮೂಲಕ ಅನ್ನದಾತನ ಯೋಜನೆಗಳನ್ನು ಕೇಂದ್ರ ಸೀಮಿತ ಮಾಡುವ ಜೊತೆಗೆ ಕೃಷಿ ಭೂಮಿಯನ್ನು ವಿದೇಶಿ ಕಂಪನಿಗಳಿಗೆ ನೀಡುತ್ತಿರುವುದು ಕೃಷಿ ವಿರೋಧಿ ನೀತಿಯಾಗಿದೆ ಎಂದರು.

ಸರ್ಕಾರ ವಿಫಲ
ಸರ್ಕಾರದ ನೀತಿಗಳು ರೈತರಿಗೆ ಮುಳುವಾಗಿವೆ. ರೈತ ಬೆಳೆಯುವ ಬೆಳೆಗೆ ಸಮರ್ಪಕವಾದ ಬೆಂಬಲ ಸಿಗದ ಹೊರತು ಕೃಷಿಕ ಮುಂದೆ ಬರಲು ಸಾಧ್ಯವಿಲ್ಲ. ಬೆಂಬಲ ಬೆಲೆ ಜೊತೆಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲದಿರುವುದು ಸಹ ಆತ್ಮಹತ್ಯೆಗೆ ಕಾರಣವಾಗಿದೆ. ಅದರಲ್ಲೂ ಬತ್ತ, ಕಬ್ಬು, ಆಲೂಗಡ್ಡೆ,. ಕಡಲೆಕಾಯಿ, ಕಾಫಿ, ಕಾಳುಮೆಣಸು ಮತ್ತು ಬೇಳೆ ಬೆಳೆಯುವ ರೈತರ ಸಹಾಯಕ್ಕೆ ಸರ್ಕಾರಗಳು ಮುಂದಾಗುತ್ತಿಲ್ಲ. ಬೆಳೆ ನಾಶ, ಕೃಷಿ ಉಪಕರಣಗಳ ಬೆಲೆ ಹೆಚ್ಚಳದಿಂದ ಕೃಷಿ ದುಬಾರಿಯಾಗಿ ಪರಿಣಮಿಸಿದೆ. ರೈತರಿಗೆ ರಕ್ಷಣೆ, ಕೃಷಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದರು.

SCROLL FOR NEXT