ಮೈಸೂರು: ಕೈದಿಗಳ ಗಾಯನಕ್ಕೆ ಮನಸೋತ ಗೃಹ ಸಚಿವರು ಮೈಕು ಹಿಡಿದು ತಾವೂ ಹಾಡಿದ ಪ್ರಸಂಗ ಮೈಸೂರಿ ನಲ್ಲಿ ನಡೆದಿದೆ.
ಇಲ್ಲಿನ ಕೇಂದ್ರ ಕಾರಾಗೃಹದಲ್ಲಿ ಶುಕ್ರವಾರ 43ನೇ ತಂಡದ ವೀಕ್ಷಕ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗೃಹ ಸಚಿವ ಡಾ.ಜಿ. ಪರಮೇಶ್ವರ ಅವರು, ಬಳಿಕ ಕಾರಾಗೃ ಹದ ಧ್ಯಾನ ಕೇಂದ್ರದ ಆವರಣದಲ್ಲಿ ಕೈದಿಗಳ ಹಾಡುಕೇಳಲು ತೆರಳಿದ್ದರು. ಕೈದಿಗಳು ಸಂಗೀತ ಪರಿಕರಗಳೊಂದಿಗೆ ಗಾಯನದಲ್ಲಿ ತಲ್ಲೀನರಾಗಿದ್ದರು. ಗೃಹ ಸಚಿವರೇ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ ಅವರ ಉತ್ಸಾಹ ಇಮ್ಮಡಿಸಿತ್ತು. ಈ ವೇಳೆ ಕೈದಿಗಳ ಗಾಯನಕ್ಕೆ ಮನಸೋತ ಪರಮೇಶ್ವರ್ ಮೈಕ್ ಕೇಳಿ ಪಡೆದು ಕರುನಾಡ ತಾಯಿ ಸದಾ ಚಿನ್ಮಯಿ...
ಈ ಪುಣ್ಯಭೂಮಿ ನಮ್ಮ ದೇವಾಲಯ, ಪ್ರೇಮಾಲಯ ನಮ್ಮ... ವೀರ ವೀರರಾಳಿದ ನಾಡು ನಮ್ಮದು...ಸಂಗೀತ ಸಾಹಿತ್ಯ ನೆಲೆ ನಮ್ಮದು...ಎಂದು ಹಾಡುತ್ತ. ಕುಣಿಯುತ್ತಾ ಎಲ್ಲರನ್ನು ರಂಜಿಸಿದರು. ವಿಶೇಷವೆಂದರೆ ಕೈದಿಯೊಬ್ಬರ ಹೆಗಲ ಮೇಲೆ ಕೈ ಹಾಕಿಕೊಂಡೇ ಅವರು ಹಾಡು ಹೇಳಿದ್ದು.
ಈ ಮಧುರ ಕ್ಷಣವನ್ನು ಕಾರಾಗೃಹ ಇಲಾಖೆ ಮಹಾನಿರೀಕ್ಷಕ ಮತ್ತು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಕಮಲ್ ಪಂತ್, ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್, ಕಾರಾಗೃಹ ಮುಖ್ಯ ಅಧೀಕ್ಷಕ ಪಿ.ವಿ. ಆನಂದ್ ರೆಡ್ಡಿ, ಉಪ ಅಧೀಕ್ಷಕಿ ದಿವ್ಯಶ್ರೀ ಅವರು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದರು.