ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕಾನೂನು ಆಯೋಗದ ಅಧ್ಯಕ್ಷ ನ್ಯಾ.ಎಸ್. ಆರ್.ನಾಯಕ್ ಅವರನ್ನು ಲೋಕಾಯುಕ್ತ ಹುದ್ದೆಗೆ ನೇಮಕ ಮಾಡುವ ಚಿಂತನೆಗೆ ಆರಂಭದಲ್ಲೇ ವಿಘ್ನವುಂಟಾಗಿದೆ.
ನ್ಯಾ.ಭಾಸ್ಕರ್ ರಾವ್ ರಾಜಿನಾಮೆ ಬೆನ್ನಲ್ಲೇ ಲೋಕಾಯುಕ್ತರ ನೇಮಕ ಪ್ರಕ್ರಿಯೆ ಚುರುಕುಗೊಂಡಿದೆ. ಈ ಸಂಬಂಧ ಡಿ. 21ರಂದು ಸಕ್ಷಮ ಪ್ರಾಧಿಕಾರದ ಸಭೆ ಕರೆಯಲಾಗಿದ್ದು, ನ್ಯಾ.ಎಸ್. ಆರ್.ನಾಯಕ್ ಹೆಸರು ಕೇಳಿ ಬಂದಿತ್ತು. ಸಿಎಂ ಸಿದ್ದರಾಮಯ್ಯ ಅವರಿಗೆ ಆಪ್ತರಾಗಿರುವ ನಾಯಕ್ ಅವರ ನೇಮಕದ ಬಗ್ಗೆ ಕೆಲವು ಕಾನೂನು ತೊಡಕುಗಳಿವೆ ಎಂಬ ಮಾತುಗಳು ಈಗ ಸಂಪುಟ ಸದಸ್ಯರಲ್ಲಿ ಕೇಳಿ ಬರುತ್ತಿವೆ.
ನಾಯಕ್ ಅವರು ಈ ಹಿಂದೆ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರಾಗಿದ್ದರು. ನಿಯಮ ಪ್ರಕಾರ ಮಾನವ ಹಕ್ಕು ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡವರು ಲೋಕಾಯುಕ್ತದಂಥ ಹುದ್ದೆಗೆ ನೇಮಕಗೊಳ್ಳುವಂತಿಲ್ಲ ಎಂಬ ನಿಯಮವಿದೆ. ಹೀಗಾಗಿ ಈ ವಿಚಾರ ಪರಿಹಾರವಾದ ನಂತರವೇ ಅವರ ನೇಮಕಕ್ಕೆ ಚಾಲನೆ ನೀಡಬೇಕೆಂಬ ಬಗ್ಗೆ ಸಚಿವ ಸಂಪುಟದ ಸದಸ್ಯರು ಸಲಹೆ ನೀಡಿದ್ದಾರೆ. ಹೀಗಾಗಿ ಎಸ್. ಆರ್.ನಾಯಕ್ ನೇಮಕ ಪ್ರಸ್ತಾಪಕ್ಕೆ ಆರಂಭದಲ್ಲೇ ವಿಘ್ನವುಂಟಾಗಿದೆ.
ಹೊರ ರಾಜ್ಯದವರು? : ಇದೆಲ್ಲದರ ಮಧ್ಯೆ ಹೊರ ರಾಜ್ಯಕ್ಕೆ ಸೇರಿದ ನ್ಯಾಯಮೂರ್ತಿಗಳನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ಆದರೆ ಅವರಿಗೆ ಸ್ಥಳೀಯ ಪರಿಸರ ಮತ್ತು ಸಮಸ್ಯೆಯ ಅರಿವು ಇರುವುದಿಲ್ಲ. ಹೀಗಾಗಿ ಈ ನೇಮಕದಿಂದ ಯಾವುದೇ ಪ್ರಯೋಜನವಾಗುವುದಿಲ್ಲ ಎಂಬ ಅಭಿಪ್ರಾಯವೂ ಕೇಳಿಬಂದಿದೆ. ಆದರೆ ಈ ಹುದ್ದೆಗೆ ಯೋಗ್ಯರಾದ ಕಳಂಕರಹಿತ ನ್ಯಾಯಾಧೀಶರ ಆಯ್ಕೆ ಮಾಡುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಹೀಗಾಗಿ ಈ ಬಾರಿ ಸರ್ಕಾರ ಜಾರಿಗೆ ತಂದ ಲೋಕಾಯುಕ್ತ ಕಾಯ್ದೆ ತಿದ್ದುಪಡಿ ವಿಧೇಯಕಕ್ಕೆ ಶರಣಾಗುವ ಪ್ರಯತ್ನವೂ ಕಾಣುತ್ತಿದೆ.
ಹೊಸ ತಿದ್ದುಪಡಿ ಪ್ರಕಾರ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ 10 ವರ್ಷ ಸೇವೆ
ಸಲ್ಲಿಸಿದವರನ್ನು ಲೋಕಾಯುಕ್ತ ಹುದ್ದೆಗೆ ನೇಮಕ ಮಾಡಬಹುದು. ಹೀಗಾಗಿ ಈ ವಿಧಾನದ ಮೂಲಕ ಅರ್ಹರ ನೇಮಕದ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಡಿ.21ಕ್ಕೆ ನಡೆಯುವ ಸಭೆಗೆ ಮುನ್ನ ಅರ್ಹರ ಹೆಸರಿನ ಪಟ್ಟಿ ಕೊಡುವಂತೆ ರಾಜ್ಯ ಸರ್ಕಾರ ಹೈಕೋರ್ಟ್‍ಗೆ ಮನವಿ ಮಾಡಿದೆ.