ರೈತರ ಪ್ರತಿಭಟನೆ (ಕೃಪೆ: ಕೆಪಿಎನ್ )
ಬೆಂಗಳೂರು: ಮಂಡ್ಯ ರೈತರ ಜೀವನಾಡಿಯಾಗಿರುವ ಮೈಶುಗರ್ ಮತ್ತು ಪಿಎಸ್‍ಎಸ್‍ಕೆ ಕಾರ್ಖಾನೆಗಳ ಉಳಿವಿಗಾಗಿ ಮಂಡ್ಯದಿಂದ ಬೆಂಗಳೂರಿಗೆ ಪಾದಯಾತ್ರೆ ಹಮ್ಮಿಕೊಂಡಿದ್ದ ರೈತರ ಪ್ರಯತ್ನಕ್ಕೆ ಫಲ ಸಿಕ್ಕಿದ್ದು, ಜನವರಿ ಮೊದಲ ವಾರದಿಂದಲೇ ಕಾರ್ಖಾನೆಗಳು ಕಾರ್ಯಾರಂಭಿಸಲಿವೆ ಎಂಬ ಸಚಿವರ ಭರವಸೆ ಮಾತುಗಳು ಪಾದಯಾತ್ರೆಯ ಉದ್ದೇಶವನ್ನು ಸಾಫಲ್ಯಗೊಳಿಸಿತು. ಕಳೆದ ಐದು ದಿನಗಳ ಹಿಂದೆ ಮೈಶುಗರ್ ಕಾರ್ಖಾನೆಯಿಂದ ಪಾದಯಾತ್ರೆ ಕೈಗೊಂಡಿದ್ದ ರೈತ ಸಮೂಹ ಶುಕ್ರವಾರ ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಿತು. ಇದೇ ವೇಳೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ತಮ್ಮ ಸಮಸ್ಯೆಯನ್ನು ಆಡಳಿತ ಯಂತ್ರಕ್ಕೆ ತಿಳಿಸಲು ಪ್ರಯತ್ನಿಸಿದಾಗ ಪೊಲೀಸರು ವಿಧಾನಸೌಧದ ರಸ್ತೆಯಲ್ಲೇ ಅಡ್ಡಗಟ್ಟಿದ್ದರು. ಇದರಿಂದ ಸಿಟ್ಟಾದ ರೈತರು `ಮಂಡ್ಯ ಉಸ್ತುವಾರಿ ಸಚಿವರು ಪಿಚ್ಚರ್‍ನಲ್ಲಿ ಹೀರೋ ಆಗುವುದಲ್ಲ. ಅಲ್ಲಿ ಮಂಡ್ಯದ ಗಂಡು ಎಂದು ತೋರಿಸಿಕೊಳ್ಳುವುದಲ್ಲ. ಇಲ್ಲಿಗೆ ಬಂದು ನಮ್ಮ ಸಮಸ್ಯೆ ಕೇಳಿ ಪರಿಹಾರ ನೀಡಿ ಹೀರೋ ಆಗಲಿ. ರೈತರ ಬಾಳಿಗೆ ಕೆಡುಕಾಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ..ಸಕ್ಕರೆ ಸಚಿವರಿಗೆ ಧಿಕ್ಕಾರ.. ಮಂಡ್ಯ ಉಸ್ತುವಾರಿ ಸಚಿವರಿಗೆ ಧಿಕ್ಕಾರ..' ಎಂದು ಘೋಷಣೆ ಕೂಗಿದರು. ಈ ನಡುವೆ ರೈತರೊಂದಿಗೆ ಮಾತುಕತೆಗೆ ಮುಂದಾದ ಪೊಲೀಸರು, ಸಂಬಂಧಪಟ್ಟ ಸಚಿವರು ಇಲ್ಲಿಗೆ ಆಗಮಿಸುತ್ತಾರೆ, ಪಾದಯಾತ್ರೆ ಕೊನೆಗೊಳಿಸಿ ಎಂದು ಮನವಿ ಮಾಡಿದರು. ಇದೇ ವೇಳೆ ಮಾತನಾಡಿದ ರೈತ ಮುಖಂಡ ಕೆ.ಎಸ್. ನಂಜುಂಡೇಗೌಡ, `ಸಕ್ಕರೆ ಕಾರ್ಖಾನೆಗಳು ಸಚಿವರ ಆಸ್ತಿಯಲ್ಲ. ಮಂಡ್ಯದಲ್ಲಿ ಭೂ ಮಾಫಿಯಾ ಹೆಚ್ಚಾಗುತ್ತಿದ್ದು ಯಾವುದೇ ಪಕ್ಷ ಅಧಿಕಾರಕ್ಕೆ ಬಂದಾಗಲೂ ಕಾರ್ಖಾನೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾರೆ. ಇಂತಹ ಪ್ರಯತ್ನಕ್ಕೆ ಕೈ ಹಾಕಿದವೆರಲ್ಲ ಅಯೋಗ್ಯರು. ಮೂರು
ಕಾಸಿಗೆ ಬಾಳದವರು. ಮಂಡ್ಯದಿಂದ ಪಾದಯಾತ್ರೆ ಆರಂಭಿಸಿದಾಗಲೆ ಮಾತುಕತೆಗೆ ಬಾರದವರು ಈಗ ಏನು ಮಾತನಾಡುತ್ತಾರೆ. ರೈತರು ಹಾಗೂ ರೈತರ ಮಕ್ಕಳಾದ ಪೊಲೀಸರು ಇಂದು ಬೀದಿಯಲ್ಲಿದ್ದಾರೆ. ಸಚಿವರೆಲ್ಲ ಎಸಿ ರೂಮಿನಲ್ಲಿದ್ದಾರೆ. ರೈತರಿಗೆ ರಕ್ಷಣೆ ಇಲ್ಲದಂತಾಗಿದೆ' ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಆಗ ಹಿರಿಯ ಪೊಲೀಸ್ ಅಧಿಕಾರಿ ಬಂದು ರಸ್ತೆತಡೆಯಿಂದ ಆ್ಯಂಬುಲೆನ್ಸ್‍ಗೆ ತೊಂದರೆಯಾಗಿದೆ. ದಯವಿಟ್ಟು ರಸ್ತೆತಡೆ ಬಿಟ್ಟು ಫ್ರೀಡಂ ಪಾರ್ಕ್‍ನ ಕಾಳಿದಾಸ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಎಂದು ಮನವಿ ಮಾಡಿದರು. ಹೀಗಾಗಿ ರೈತರು ವಿಧಾನಸೌಧ ಮುತ್ತಿಗೆ ಹಾಕುವ ಪ್ರಯತ್ನ ಕೈಬಿಟ್ಟು ಸಾವಧನದಾದಿಂದ ಕಾಳಿದಾಸ ರಸ್ತೆಯಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದರು. ಪಾದಯಾತ್ರೆ ರೈತ ಮುಖಂಡರಾದ ನಂದಿನಿ ಜಯರಾಂ, ಬಡಗಲಪುರ ನಾಗೇಂದ್ರ ರಾಜೇಗೌಡ, ಚನ್ನಪಟ್ಟಣ ರಾಮು, ರಾಮಕೃಷ್ಣಯ್ಯ, ನರಸರಾಜು, ನಂಜುಂಡಯ್ಯ, ಹನಕೆರೆ ಕಾಡಯ್ಯ, ಲಿಂಗಪ್ಪಾಜಿ ಸೇರಿದಂತೆ 300ಕ್ಕೂ ಹೆಚ್ಚು ಮಂದಿ ರೈತರು ಪಾಲ್ಗೊಂಡಿದ್ದರು.
ಕಾರ್ಖಾನೆ ಆರಂಭದ ಸುಳಿವು ನೀಡಿದ ಸಚಿವರು
ಬೆಂಗಳೂರು: ರೈತರು ಹಮ್ಮಿಕೊಂಡಿದ್ದ ಪಾದಯಾತ್ರೆಯ ವಿಷಯ ತಿಳಿಯುತ್ತಿದ್ದಂತೆ ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ಫ್ರೀಡಂ ಪಾರ್ಕಿಗೆ ದೌಡಾಯಿಸಿ, ಜನವರಿ ಮೊದಲ ವಾರದಲ್ಲಿ ಕಾರ್ಖಾನೆ ಕಾರ್ಯಾರಂಭವಾಗಲಿದೆ ಎಂದು ಭರವಸೆ ನೀಡಿದರು. ಮೈಷುಗರ್ ಕಾರ್ಖಾನೆಯಲ್ಲಿ ಎರಡು ಬಾಯ್ಲರ್‍ಗಳು ದುರಸ್ತಿಯಾಗಿವೆ. ಹೀಗಾಗಿ ಕಾರ್ಯಾರಂಭ ವಿಳಂಬವಾಗಿದೆ. ಮೊದಲಿಗೆ ಎರಡೂವರೆ ಸಾವಿರ ಮೆಟ್ರಿಕ್ ಟನ್ ಕಬ್ಬು ಅರೆಯಲಿದ್ದು, ಮೂರು ನಾಲ್ಕು ತಿಂಗಳಲ್ಲಿ ಮೂರು ಲಕ್ಷ ಟನ್ ಕಬ್ಬು ಅರೆಯಲು ಸೂಚಿಸಲಾಗಿದೆ. ಯಾವುದೇ ಬ್ಯಾಂಕುಗಳು ಸಾಲ ನೀಡುತ್ತಿಲ್ಲ. ಸರ್ಕಾರದಿಂದ ರು.95
ಕೋಟಿ ವೆಚ್ಚ ಮಾಡಿ ದುರಸ್ತಿ ಮಾಡಿಸಲಾಗುತ್ತಿದೆ. ಈ ಕಾರ್ಖಾನೆ ರು.500 ಕೋಟಿಯಷ್ಟು ನಷ್ಟ ಅನುಭವಿಸುತ್ತಿದೆ. ಪಾಂಡವಪುರ ಸಕ್ಕರೆ ಕಾರ್ಖಾನೆಯನ್ನು ಪುನರರಾಂಭಿಸಲು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ ಎಂದರು. ಪ್ರಸಕ್ತ ಸಾಲಿನಲ್ಲಿ ಕಬ್ಬು ಅರೆಯಲು ಪ್ರತಿಯೊಬ್ಬ ರೈತರಿಗೂ ಟನ್ ಕಬ್ಬಿಗೆ ರು.75 ಮುಂಗಡ ಹಣ ನೀಡುವಂತೆ ಕಾರ್ಖಾನೆಗಳಿಗೆ ಸೂಚಿಸಲಾಗಿದೆ. ಅಲ್ಲದೆ ರೈತರು ಬ್ಯಾಂಕಿನಲ್ಲಿಟ್ಟಿರುವ ಚಿನ್ನಾಭರಣಗಳನ್ನು ಹರಾಜು ಹಾಕದಿರುವಂತೆ ಸಂಬಂಧಪಟ್ಟ ಬ್ಯಾಂಕುಗಳಿಗೂ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.