ಜಿಲ್ಲಾ ಸುದ್ದಿ

ಸರ್ಕಾರಕ್ಕೆ ಲೋಕಾಯುಕ್ತವೇ ಬೇಕಾಗಿಲ್ಲ: ನ್ಯಾ.ಸಂತೋಷ್ ಹೆಗ್ಡೆ

Srinivas Rao BV

ಉಡುಪಿ: ಲೋಕಾಯುಕ್ತ ಎಂಬ ಸಂಸ್ಥೆ ಅಸ್ತಿತ್ವದಲ್ಲಿ ಇರುವುದು ಬೇಕಾಗಿಲ್ಲ ಎಂಬಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ ಎಂದು ಮಾಜಿ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ಹುದ್ದೆಯಲ್ಲಿದ್ದ ಭಾಸ್ಕರ ರಾವ್ ರಾಜಿನಾಮೆ ನೀಡಿ ಹೋಗಿಯಾಯಿತು, ಇನ್ನು ಉಪಲೋಕಾಯುಕ್ತ ಸುಭಾಷ್ ಆಡಿ ಅವರನ್ನು ಕೂಡ ಹೊರಗೆ ಹಾಕಿದರೆ ಅಲ್ಲಿಗೆ ಲೋಕಾಯುಕ್ತ ಸಂಸ್ಥೆಯೇ  ಖಾಲಿಯಾಗುತ್ತದೆ. ತಾವು ಆರಾಮವಾಗಿರಬಹುದು, ತಮ್ಮ ತಪ್ಪುಗಳನ್ನೆಲ್ಲಾ ಮುಚ್ಚಿ ಹಾಕಬಹುದು ಎಂದು ನಮ್ಮ ರಾಜಕಾರಣಿಗಳು ಯೋಚಿಸುತ್ತಿದ್ದಾರೆ ಎಂದು ನ್ಯಾ. ಹೆಗ್ಡೆ ಕಿಡಿಕಾರಿದರು.
ಉಪಲೋಕಾಯುಕ್ತ ಸುಭಾಷ್ ಆಡಿ ಅವರ ಪ್ರಾಮಾಣಿಕತೆಯ ಬಗ್ಗೆ ನಾನೇನೂ ಚರ್ಚಿಸುವುದಿಲ್ಲ, ಆದರೆ ವರ್ಷಗಳ ಹಿಂದೆ ನಡೆದ ಘಟನೆಗಳು ಈಗ ಏಕೆ ಸರ್ಕಾರಕ್ಕೆ ನೆನಪಾಯಿತು? ಈಗ ಅವುಗಳ ಮೇಲೆ ಠರಾವು ಮಂಡಿಸುತ್ತಿದೆ ಎಂದವರು ಪ್ರಶ್ನಿಸಿದರು. ನ್ಯಾ. ಭಾಸ್ಕರ ರಾವ್ ಅವರು ಲೋಕಾಯುಕ್ತ ಹುದ್ದೆಗೆ ನೇಮಕವಾಗುವಾಗಲೇ ಅನೇಕ ಹಿರಿಯ ವಕೀಲರು ವಿರೋಧಿಸಿದ್ದರು. ಅವರು ಎಂತಹವರು ಎಂಬುದು ಆಗಲೇ ಬಹಿರಂಗವಾಗಿತ್ತು. ಆದರೂ ಅವರನ್ನು ಸರ್ಕಾರ ನೇಮಕ ಮಾಡಿತು. ಅವರಂತವರು ಆ ಹುದ್ದೆಯಲ್ಲಿದ್ದರೆ ತಮ್ಮ ತಪ್ಪು ಬಹಿರಂಗವಾಗುವುದಿಲ್ಲ ಎಂಬ ಕಾರಣಕ್ಕಾಗಿಯೇ ಸರ್ಕಾರದ ಕೆಲವರು ಅವರನ್ನು ಆ ಹುದ್ದೆಗೆ ನೇಮಕವಾಗುವಂತೆ ನೋಡಿಕೊಂಡರು ಎಂದು ನ್ಯಾ. ಸಂತೋಷ್ ಹೆಗ್ಡೆ  ಅಭಿಪ್ರಾಯಪಟ್ಟರು. ಅಲ್ಲದೆ, ಸರ್ಕಾರ 2014ರಲ್ಲೇ ಲೋಕಾಯುಕ್ತಕ್ಕೆ ಸಂಬಂಧಿಸಿದ ಕಾಯ್ದೆಯನ್ನು ಜಾರಿಗೊಳಿಸುವುದಕ್ಕೆ ಪ್ರಯತ್ನಿಸಿತ್ತು. ಆ ಕಾಯ್ದೆಯಲ್ಲಿ ಲೋಕಾಯುಕ್ತವನ್ನು ಬಲಹೀನಗೊಳಿಸುವ ಹುನ್ನಾರವೂ ಅಡಗಿತ್ತು ಎಂದು ಅವರು ಹೇಳಿದರು.

SCROLL FOR NEXT