ಜಿಲ್ಲಾ ಸುದ್ದಿ

ಮೂರ್ತಿ ಸ್ಥಾಪನೆ ಮೂಢನಂಬಿಕೆಯಲ್ಲ: ವಿಶ್ವ ಸಂತೋಷ ಭಾರತಿ ಸ್ವಾಮಿಜಿ

Srinivas Rao BV

ಬೆಂಗಳೂರು: ನಾಗಬನ, ಭೂತಾರಾಧನೆ, ಮುನೇಶ್ವರ ಹೀಗೆ ಒಂದೊಂದೆಡೆ ಒಂದು ಹೆಸರಿನ ದೇವರ ಮೂರ್ತಿ ಸ್ಥಾಪಿಸಿರುವುದು ಮೂಢನಂಬಿಕೆಯಲ್ಲ, ಅಲ್ಲಿರುವ ನಿಸರ್ಗ ರಕ್ಷಣೆ ಮಾಡಲು ಕಂಡುಕೊಂಡ ವಿಧಾನ ಎಂದು ಆಯುರ್ ಆಶ್ರಮದ ವಿಶ್ವ ಸಂತೋಷ ಭಾರತಿ ಸ್ವಾಮಿಜಿ ಅಭಿಪ್ರಾಯಪಟ್ಟರು.
ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ನಡೆಯುತ್ತಿರುವ ಹಿಂದೂ ಆಧ್ಯಾತ್ಮಿಕ ಮತ್ತು ಸೇವಾ ಮೇಳದ 'ಪ್ರಕೃತಿ ವಂದನಾ' ಕಾರ್ಯ ಕ್ರಮದಲ್ಲಿ ಮಾತನಾಡಿದ ಅವರು, ಹಲವಾರು ವರ್ಷಗಳ ಹಿಂದೆ ಮನುಷ್ಯನನ್ನು ಬಂಧಿಸಲು ಕಾನೂನುಗಳಿರಲಿಲ್ಲ.
ಆದ್ದರಿಂದ ಹೀಗೆ ದೇವರುಗಳ ಹೆಸರಿನಲ್ಲಿ ಆತನನ್ನು ಬಂಧಿಸಲಾಗುತ್ತಿತ್ತು ಎಂದರು. ಮಣ್ಣಿಗೆ ಕಬ್ಬಿಣ, ಮರದೆಲೆಗಳು, ಬಂಗಾರ ಎಲ್ಲವನ್ನೂ ತನ್ನದಾಗಿಸಿಕೊಳ್ಳುವ ಶಕ್ತಿ ಇರುತ್ತದೆ ಆದ್ದರಿಂದ ಮಣ್ಣಿನಿಂದ ಏನು ಬೇಕಾದರೂ ನಿರ್ಮಿಸಬಹುದು. ಎಲ್ಲ ಹಂತದಲ್ಲೂ ವಿಜ್ಞಾನದ ಜತೆಗೆ ವಿಚಾರ ಕೂಡ ಮುಖ್ಯ ಎಂದು ಅಭಿಪ್ರಾಯಪಟ್ಟರು. ಮತಾಂತರವಾದರೆ ಭಗವಂತನಿಗೆ ದ್ರೋಹ ಮಾಡಿದಂತೆ. ಯಾರೂ ಕೂಡ ದೇವರಲ್ಲಿ ಅರ್ಜಿ ಹಾಕಿ ನಿಗದಿತ ಧರ್ಮದಲ್ಲಿ ಹುಟ್ಟಿದವರಲ್ಲ. ಆತನಿಗೆ ಇಷ್ಟವಾದವರನ್ನು ಅವನಿಗೆ ಬೇಕಾದ ಧರ್ಮದಲ್ಲಿ ಹುಟ್ಟಿಸುತ್ತಾನೆ.
ಜನ್ಮವೆತ್ತಮೇಲೆ ನಾವಿರುವ ಧರ್ಮ, ಜಾತಿಯನ್ನು ಗೌರವಿಸಬೇಕು ಧರ್ಮ ಬಿಟ್ಟು ಯಾರು ಹೋಗಬೇಡಿ ಕುಲಕ್ಕೆ ಕೃತಜ್ಞರಾಗಿರಿ ಎಂದು ಕಿವಿಮಾತು ಹೇಳಿದರು. ಪರಿಸರ ತಜ್ಞ ಡಾ.ಯಲ್ಲಪ್ಪರೆಡ್ಡಿ ಮಾತನಾಡಿ, ಅರಣ್ಯ ಯಾರಿಗೂ ಹಾನಿ ಮಾಡಲ್ಲ. ಪ್ರಾಣಿಗಳು ಸಹ ಮಾನವನಿಗೆ ಎಂದೂ ಕೇಡು ಬಯಸಲ್ಲ. ನಾವು ಕಿಂಚಿತ್ ಪ್ರೀತಿ ತೋರಿದರೂ ಸಾಕು. ಅವು ತಮ್ಮ ಜೀವ ಬೇಕಾದರೂ ಕೊಡುವಷ್ಟು ಪ್ರೀತಿ ನೀಡುತ್ತವೆ. ಮನುಷ್ಯನೇ
ಪ್ರಾಣಿಗಳನ್ನು ಕ್ರೂರವಾಗಿ ವರ್ತಿಸುವಂತೆ ಮಾಡುತ್ತಾನೆ ಎಂದರು. ಎಲೆಗೆ ಹೆಚ್ಚಿನ ಜ್ಞಾನೇಂದ್ರಿಯ ಇರುತ್ತದೆ. ಹಾಗೆಯೇ ನೊಣಕ್ಕೂ ಕೂಡ ತನ್ನ ಕಾಲಿನಲ್ಲೇ ಸಿಹಿಯನ್ನು ಗ್ರಹಿಸಬಲ್ಲ ವರವಿದೆ. ತುಳಸಿಯಲ್ಲಿ ಗಾಳಿಯಲ್ಲಿ ಬರುವ ಅನೇಕ ಕೀಟಾಣುಗಳನ್ನು ಕೊಲ್ಲುವ ಬಲವಿದೆ. ಆದ್ದರಿಂದ ಪ್ರತಿಯೊಬ್ಬರ ಮನೆಯಲ್ಲೂ ತುಳಸಿಯನ್ನು ಬೆಳೆಸಿ ನಿತ್ಯವೂ ಅದನ್ನು ಪೂಜಿಸಿ ಎಂದು ಸಲಹೆ ನೀಡಿದರು.
ಸುಮಾರು 2500 ವಿದ್ಯಾರ್ಥಿನಿಯರು ತುಳಸಿ ಪೂಜೆ ಮಾಡುವ ಮೂಲಕ ಪ್ರಕೃತಿಗೆ ವಂದನೆ ಸಲ್ಲಿಸಿದರು. ಮಕ್ಕಳಿಂದ ಜಾನಪದ ನೃತ್ಯ, ಕೋಲಾಟ, ಹಾಗೂ ನಿರ್ಪಮಾ-ರಾಜೇಂದ್ರ ಡ್ಯಾನ್ಸ್ ಕಂಪನಿಯಿಂದ ಓಜಸ್ ನೃತ್ಯ ರೂಪಕ ನಡೆಯಿತು.

SCROLL FOR NEXT