ಜಿಲ್ಲಾ ಸುದ್ದಿ

ಮಾತೃಭಾಷೆಗೆ ಆದ್ಯತೆ ನೀಡಿ

Manjula VN

ಬೆಂಗಳೂರು: ಶಿಕ್ಷಣ, ಆಡಳಿತ ಹಾಗೂ ನ್ಯಾಯಾಂಗದಲ್ಲಿ ಮಾತೃಭಾಷೆಗೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಭಾಷಾವಾರು ಪ್ರಾಂತ್ಯ ರಚನೆಯ ಉದ್ದೇಶ ಸಾಕಾರವಾಗುತ್ತದೆ ಎಂದು ಕೇರಳದ ಶಿಕ್ಷಣ ಮತ್ತು ಸಂಸ್ಕೃತಿ ಖಾತೆ ಮಾಜಿ ಸಚಿವ ಎಂ.ಎ.ಬೇಬಿ ಅಭಿಪ್ರಾಯಪಟ್ಟರು.

ಕಬ್ಬನ್ ಪಾರ್ಕ್‍ನಲ್ಲಿರುವ ಸಚಿವಾಲಯ ಕ್ಲಬ್‍ನಲ್ಲಿ ಜನಶಕ್ತಿ ಉತ್ಸವಕ್ಕೆ ಚಾಲನೆ ನೀಡಿದ ಅವರು, ಬಳಿಕ `ಭಾಷಾವಾರು ರಾಜ್ಯಗಳ ಅಧಿಕಾರಗಳ ಸವೆತ' ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು. ಸಾಮರಸ್ಯ ಹಾಗೂ ಸೌಹಾರ್ದತೆ ಪ್ರತೀಕವಾದ ಭಾಷೆಗೆ ಸಮುದಾಯಗಳನ್ನು ಒಗ್ಗೂಡಿಸುವ ಶಕ್ತಿಯಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ರಾಜಕಾರಣದ ಮೇಲಾಟದಲ್ಲಿ ಭಾಷೆ ಮತ್ತು ಧರ್ಮದ ಹೆಸರಿನಲ್ಲಿ ದೇಶ ಒಡೆಯುವ ಕೆಲಸಗಳಾಗುತ್ತಿವೆ. ದೇಶದಲ್ಲಿ ಭಾಷಾವಾರು ಪ್ರಾಂತ್ಯ ರಚನೆಯಾಗಿದ್ದರೂ ಮಾತೃಭಾಷೆ ಕಡೆಗಣನೆಗೆ ಒಳಗಾಗಿದೆ. ಶಿಕ್ಷಣ, ಆಡಳಿತ ಹಾಗೂ ನ್ಯಾಯಾಂಗದಲ್ಲಿ ಇಂಗ್ಲಿಷ್ ಸವಾರಿ ಮಾಡುತ್ತಿದೆ. ಇದು ಪ್ರಜಾಪ್ರಭುತ್ವದ ಅಣಕ ಎಂದು ಬೇಸರ ವ್ಯಕ್ತಪಡಿಸಿದರು.

ಮೂಲ ಉದ್ದೇಶ ಈಡೇರಿಲ್ಲ:

ನಮ್ಮದು ಪ್ರಜಾಪ್ರಭುತ್ವ ವ್ಯವಸ್ಥೆ. ಅಧಿಕಾರ ವಿಕೇಂದ್ರೀಕರಣದ ಹಿನ್ನೆಲೆಯಲ್ಲಿ ಸ್ಥಳೀಯ ಸಂಸ್ಥೆಗಳು, ಪಾಲಿಕೆಗಳು, ಮುನ್ಸಿಪಾಲಿಟಿಗಳು ರಚನೆಯಾಗಿ ಹಲವು ವರ್ಷ ಉರುಳಿದೆ. ಆದರೆ, ಇಂದಿಗೂ ಅಧಿಕಾರ ವಿಕೇಂದ್ರೀಕರಣದ ಮೂಲ ಉದ್ದೇಶ ಈಡೇರಿಲ್ಲ. ದೆಹಲಿಯಲ್ಲೇ ಅಧಿಕಾರ ಕೇಂದ್ರೀಕರಣವಾಗಿದೆ. ಮಹಾತ್ಮ ಗಾಂಧಿ ಅವರ ಗ್ರಾಮ ಸ್ವರಾಜ್ಯದ ಕನಸು ಸಂಪೂರ್ಣವಾಗಿ ಈಡೇರಿಲ್ಲ ಎಂದರು.

ಸಾಮರಸ್ಯ ಕದಡಿದೆ
ಪ್ರಸ್ತುತ ದೇಶದಲ್ಲಿ ಕೋಮು ಸಾಮರಸ್ಯ ಹದಗೆಟ್ಟಿದೆ. ಭಾಷೆ, ಧರ್ಮದ ರಾಜಕೀಯದಿಂದ ಕಲಬುರುಗಿ, ದಾಬೋಲ್ಕರ್ ಮೊದಲಾದ ವಿಚಾರವಾದಿಗಳ ಹತ್ಯೆ ನಡೆದಿದೆ. ಮಾಧ್ಯಮಗಳು ಕೂಡ ದೇಶದ ವಾಸ್ತವಾಂಶಗಳ ಮೇಲೆ ಬೆಳಕು ಚೆಲ್ಲುತ್ತಿಲ್ಲ. ಕೇವಲ ಟಿಆರ್ ಪಿ ಬೆನ್ನು ಬಿದ್ದು ನಕಾರಾತ್ಮಕ ಅಂಶಗಳಿಗೆ ಹೆಚ್ಚು ಆದ್ಯತೆ ನೀಡುತ್ತಿವೆ. ಇನ್ನು ದೇಶದಲ್ಲಿ ಸುಮಾರು 3 ಲಕ್ಷ ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗುತ್ತಿದೆ. ಇದು ನಿಜಕ್ಕೂ ಆತ್ಮಹತ್ಯೆ ಅಲ್ಲ. ದುರ್ಬಲ ಆರ್ಥಿಕ ನೀತಿಗಳು ಮಾಡಿದ ಕೊಲೆ ಎಂದು ಅವರು ವ್ಯಾಖ್ಯಾನಿಸಿದರು. ಇದೇ ವೇಳೆ ಜನಶಕ್ತಿ ರಾಜ್ಯೋತ್ಸವ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿದರು.

ಕಾರ್ಯಕ್ರಮದಲ್ಲಿ ಜನಶಕ್ತಿ ಸಂಪಾದಕ ಮಂಡಳಿ ಸದಸ್ಯ ಜಿ.ಎನ್.ನಾಗರಾಜ್, ವಿಶ್ರಾಂತ ಕುಲಪತಿ ಪೊ್ರ.ಎಸ್.ಚಂದ್ರಶೇಖರ್, ಮಾಜಿ ಶಾಸಕ ಜಿ.ವಿ.ಶ್ರೀರಾಮರೆಡ್ಡಿ ಮತ್ತಿತರರು ಉಪಸ್ಥಿತರಿದ್ದರು.

SCROLL FOR NEXT