ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಈ ಬಗ್ಗೆ ಸಿಐಡಿ ತನಿಖೆಯಾಗಬೇಕು ಎಂದು ರಂಗೋತ್ರಿ ಮಕ್ಕಳ ರಂಗಶಾಲೆ ಸಂಸ್ಥಾಪಕ ಕಾರ್ಯದರ್ಶಿ ಕೆ.ಎಚ್. ಕುಮಾರ್ ಒತ್ತಾಯಿಸಿದರು.
ರವೀಂದ್ರ ಕಲಾಕ್ಷೇತ್ರದ ನಿರ್ವಹಣೆಗೆ 2014ರಲ್ಲಿ ರು.4 ಕೋಟಿ, 2015ರಲ್ಲಿ ರು.7 ಕೋಟಿ ಅನುದಾನ ಬಿಡುಗಡೆಯಾಗಿದೆ. ಅದೇ ರೀತಿ ನಯನ ರಂಗಮಂದಿರಕ್ಕೂ ಪ್ರತಿ ವರ್ಷ ಅನುದಾನ ಬಿಡುಗಡೆಯಾಗುತ್ತಿದೆ. ಆದರೆ, ಸರ್ಕಾರದ ಅನುದಾನ ಸಮರ್ಪಕವಾಗಿ ಅಭಿವೃದ್ಧಿ ಕಾರ್ಯಕ್ಕೆ ಬಳಕೆಯಾಗದೆ, ದುರ್ಬಳಕೆಯಾಗುತ್ತಿದೆ. ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಹಣವನ್ನು ಲೂಟಿ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿದರು.
ರಂಗಭೂಮಿಗೆ ವಿದ್ಯಾರ್ಥಿಗಳನ್ನು ಆಕರ್ಷಿಸಲು 2014-15ನೇ ಸಾಲಿನ ಬಜೆಟ್‍ನಲ್ಲಿ ಅಂತರ್ ಕಾಲೇಜು ರಂಗ ಸ್ಪರ್ಧೆಗೆ ವಿಶೇಷ ಅನುದಾನ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ
ಪತ್ರದ ಮೂಲಕ ಮನವಿ ಮಾಡಲಾಗಿತ್ತು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು, ಬಜೆಟ್‍ನಲ್ಲಿ ರು.3 ಕೋಟಿ ಅನುದಾನ ಘೋಷಿಸಿದ್ದರು. ಆದರೆ, ಇಷ್ಟು ತಿಂಗಳು ಸುಮ್ಮನಿದ್ದ ಅಧಿಕಾರಿಗಳು, ಪರೀಕ್ಷೆ ನಡೆಯುವ ಸಮಯದಲ್ಲಿ ಏಕಾಏಕಿ ಅಂತರ್ ಕಾಲೇಜು ಸ್ಪರ್ಧೆ ಏರ್ಪಡಿಸಲು ಮುಂದಾಗಿದ್ದಾರೆ. ಪರೀಕ್ಷೆ ಸಮಯದಲ್ಲಿ ಒತ್ತಡದಲ್ಲಿರುವ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವುದು ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದರೂ, ಕಾರ್ಯಕ್ರಮ ಆಯೋಜಿಸಲು ಮುಂದಾಗಿದ್ದಾರೆ ಎಂದು ದೂರಿದರು.