ಬೆಂಗಳೂರು: ಬೆಂಗಳೂರು ವಕೀಲರ ಭವನ ನಿರ್ಮಾಣ ಕಾರ್ಯಗಳ ಮೇಲ್ವಿಚಾರಣೆಗೆ ನೇಮಕಗೊಂಡಿದ್ದ ಕಟ್ಟಡ ಸಮಿತಿ ಪುನರ್ ರಚಿಸಿದ ಕುರಿತು ಅಧಿಸೂಚನೆ ಪ್ರಕಟಿಸುವಲ್ಲಿ
ವಿಳಂಬ ಅನುಸರಿಸುತ್ತಿರುವ ಸಂಬಂಧ ಸಿಎಸ್ ಕೌಶಿಕ್ ಮುಖರ್ಜಿ ಖುದ್ದು ಹಾಜರಾಗಬೇಕು ಎಂದು ಹೈಕೋರ್ಟ್ ಸೂಚಿಸಿದೆ.
ಬೆಂಗಳೂರು ವಕೀಲರ ಭವನ ನಿರ್ಮಾಣದ ಸಂಬಂಧ ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ 1996ರಲ್ಲಿ ಅಂದಿನ ರಾಜ್ಯ ಮುಖ್ಯಮಂತ್ರಿಗಳು ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾ.ಮೋಹನ ಶಾಂತನ ಗೌಡರ್ ಮತ್ತು ನ್ಯಾ.ಬಿ.ವೀರಪ್ಪ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆ ಮುಂದೂಡಿದೆ.
ಬೆಂಗಳೂರು ವಕೀಲರ ಭವನ ನಿರ್ಮಾಣದ ಉಸ್ತುವಾರಿಗೆ ಹೈಕೋರ್ಟ್ 1996ರಲ್ಲಿ ಕಟ್ಟಡ ಸಮಿತಿ ನೇಮಿಸಿತ್ತು, ಆ ಸಮಿತಿಗೆ ಮಾಜಿ ಅಡ್ವೋಕೇಟ್ ಜನರಲ್ ಆರ್.ಎನ್.ನರಸಿಂಹಮೂರ್ತಿ ಮುಖ್ಯಸ್ಥ ಹಾಗೂ ನ್ಯಾ.ಕೆ.ಎಲ್. ಮಂಜುನಾಥ್ ಸದಸ್ಯರಾಗಿದ್ದರು. ಇತ್ತೀಚೆಗೆ ನರಸಿಂಹ ಮೂರ್ತಿ ಮೃತಪಟ್ಟ ಹಾಗೂ ವಕೀಲರಾಗಿದ್ದ ಕೆ.ಎಲ್. ಮಂಜುನಾಥ್ ಅವರು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದ ಕಾರಣ ಕಟ್ಟಡ ಸಮಿತಿಯಲ್ಲಿನ ಇವರಿಬ್ಬರ ಸ್ಥಾನಗಳು ತೆರವಾಗಿದ್ದವು.
ಆದ್ದರಿಂದ ಆರ್.ಎನ್.ನರಸಿಂಹಮೂರ್ತಿ ಅವರ ಸ್ಥಾನಕ್ಕೆ ಹಿರಿಯ ವಕೀಲ ಬಿ.ವಿ. ಆಚಾರ್ಯ ಮತ್ತು ನ್ಯಾ.ಕೆ. ಎಲ್.ಮಂಜುನಾಥ್ ಅವರಿದ್ದ ಸದಸ್ಯ ಸ್ಥಾನಕ್ಕೆ ಹಿರಿಯ ವಕೀಲ ಡಿ.ಎನ್ .ನಂಜುಂಡ ರೆಡ್ಡಿ ಅವರನ್ನು ನೇಮಕ ಮಾಡುವ ಮೂಲಕ ಸಮಿತಿಯನ್ನು ಪುನರ್ ರಚನೆ ಮಾಡಿ ನ್ಯಾಯಪೀಠ ಕಳೆದ ನ.5ರಂದು ಆದೇಶಿಸಿತ್ತು. ಅಲ್ಲದೆ, ಕಟ್ಟಡ ಸಮಿತಿ ಪುನರ್ ರಚನೆ ಕುರಿತು ರಾಜ್ಯ ಸರ್ಕಾರ ಅಧಿಸೂಚನೆ ಪ್ರಕಟಿಸಬೇಕು ಎಂದು ನ್ಯಾಯಪೀಠ ನಿರ್ದೇಶನವೂ ನೀಡಿತ್ತು.