ಬೆಂಗಳೂರು: ಐಟಿ-ಬಿಟಿ ಊರು, ಉದ್ಯಾನನಗರಿ ಎಂಬಿತ್ಯಾದಿ ಹೆಸರುಗಳಿಂದ ಪರಿಚಿತವಾಗಿದ್ದ ಬೆಂಗಳೂರು ನಗರ ವರ್ಷದಿಂದೀಚೆಗೆ ಕಸದಿಂದಲೇ ಹೆಸರುವಾಸಿಯಾಗುತ್ತಿದೆ. ಈ ಹಣೆಪಟ್ಟಿಯಿಂದ ಹೊರತರಲು ಪ್ರಯತ್ನಿಸುತ್ತಿರುವ ಬಿಬಿಎಂಪಿ, ನಾಗರಿಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಸದ ಸಮಸ್ಯೆ ನೀಗಿಸಲು ಪ್ರಯತ್ನಿಸುತ್ತಿದೆ.
ಇದರ ಮೊದಲ ಹಂತವಾಗಿ ಮನೆಯ ಹಸಿ ಮತ್ತು ಒಣ ಕಸವನ್ನು ಬೇರ್ಪಡಿಸುವಂತೆ ನಗರದಾದ್ಯಂತ ಅರಿವು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಪ್ರತಿ ಬೀದಿಗೂ ತೆರಳಿ ಕಸದ ನಿರ್ವಹಣೆಯನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಸುತ್ತಿದೆ. ಆಕಸ್ಮಾತ್ ಬಿಬಿಎಂಪಿ ಕರೆಗೆ ಓಗೋಡದಿದ್ದರೆ ಮುಂದಿನ ಹಂತವಾಗಿ ನ್ಯಾಯಾಲಯದ ಆದೇಶದಂತೆ ಬಿಬಿಎಂಪಿ ಎಂಜಿನಿರ್ ಗಳನ್ನು ಮನೆಗಳಿಗೆ ಕಳುಹಿಸಿ ಸಲಹೆ ಕೊಡಿಸಲಿದೆ. ಅದನ್ನೂ ನೀವು ನಿರ್ಲಕ್ಷಿಸಿದರೆ ಅಂತಿಮವಾಗಿ ದಂಡ ವಿಧಿಸುವ ಹಂತಕ್ಕೆ ಹೋಗುವುದು ನಿಶ್ಚಿತ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ.
ಮೂಲದಲ್ಲೇ ಕಸ ವಿಂಗಡಿಸುವ ನೀತಿಯನ್ನು ಉಲ್ಲಂಘಿಘಿಸುವುದನ್ನು ತಡೆಯಲು ಬಿಬಿಎಂಪಿ ತನ್ನ ಎಲ್ಲ ಎಂಜಿನಿಯರುಗಳಿಗೂ ಏನು ಮಾಡಬೇಕೆಂದು ಸೂಚನೆ ನೀಡಿದೆ. ಜೊತೆಗೆ ಘನ ತ್ಯಾಜ್ಯದ ನಿರ್ವಹಣೆಗೆ ಕಾನೂನು ರೀತಿ ಹಕ್ಕು ಚಲಾಯಿಸಲು ಎಲ್ಲ ಅಧಿಕಾರವನ್ನು ನೀಡಿದೆ. ಅಕ್ರಮವಾಗಿ ಕಸವನ್ನು ಹಾಕಲಾಗುತ್ತಿರುವ ಜಾಗಗಳನ್ನು ಗಮನಿಸಿ, ಅಲ್ಲಿ ಕಸವನ್ನು ಹಾಕದಂತೆ ಎಂಜಿನಿಯರುಗಳು ಗಮನ ವಹಿಸಲಿದ್ದಾರೆ. ಒಂದು ವೇಳೆ ಇವರ ಮಾತಿಗೆ ತಪ್ಪಿ ನಡೆದರೆ ತಪ್ಪಿತಸ್ಥರಿಗೆ ರು.500 ದಂಡ ಬೀಳುವುದು ಖಚಿತವಾಗಿದೆ!