ಬೆಂಗಳೂರು: ಪೋಲೀಸ್ ಪೇದೆಗಳು ಹಿರಿಯ ಅಧಿಕಾರಿಗಳ ಕಿರುಕಳ ತಾಳದೆ ದಯಾಮರಣ ಕೇಳುತ್ತಿರುವ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡ ರಚಿಸಲಾಗುವುದು ಎಂದು ಗೃಹ ಪರಮೇಶ್ವರ್ ಹೇಳಿದ್ದಾರೆ.
ಇತ್ತೀಚಿಗೆ 10 ಪೇದೆಗಳು ಹಿರಿಯ ಅಧಿಕಾರಿಗಳ ಕಿರಿಕುಳ ತಾಳಲಾಗದೆ ದಯಾಮರಣಕ್ಕಾಗಿ ರಾಷ್ಟ್ರಪತಿ ಅವರಿಗೆ ಪತ್ರ ಬರೆದಿದ್ದಾರೆ. ಅಷ್ಟೇ ಅಲ್ಲ. ಮತ್ತೊಬ್ಬ ಪೇದೆ ಮಾನವ ಹಕ್ಕುಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಇಷ್ಟೆಲ್ಲಾ ನಡೆಯುತ್ತಿದೆ ಎಂದರೆ ಇದರ ಹಿಂದೆ ಬೇರೆಯೇನೋ ಇರಬೇಕು. ಇದನ್ನು ಪತ್ತೆ ಮಾಡಲು ಅಧಿಕಾರಿಗಳ ತಂಡ ರಚಿಸಲಾಗಿದೆ.
ಅಧಿಕಾರಿಗಳು ತಳ ಮಟ್ಟದವರಿಗೆ ಕಿರುಕುಳ ನೀಡುವುದನ್ನು ನಾನು ಸಹಿಸುವುದಿಲ್ಲ. ಈ ಬಗ್ಗೆ ಪೊಲೀಸ್ ಮಹಾನಿರ್ದೇಶಕರಿಗೂ ಮಾತನಾಡಿದ್ದೇನೆ. ಪೊಲೀಸ್ ಎಂದರೆ ಅದೊಂದು ಶಿಸ್ತಿನ ಪಡೆ. ಅದರಲ್ಲಿ ಹೀಗೆಲ್ಲಾ ಕಿರುಕುಳ ನಡೆಯಬಾರದು. ಆದ್ದರಿಂದ ಇದಕ್ಕೆಲ್ಲಾ ಅವಕಾಶ ನೀಡುವುದಿಲ್ಲ ಎಂದು ಪ್ರತಿಕ್ರಿಯಿಸಿದರು.
ಕಲಬುರ್ಗಿ ಹತ್ಯೆ ತನಿಖೆ ಪ್ರಗತಿ: ಹಿರಿಯ ಸಂಶೋಧಕ ಡಾ.ಎಂ.ಎಂ. ಕಲಬುರ್ಗಿ, ದಾಬೋಲ್ಕರ್, ಪನ್ಸಾರೆ ಹತ್ಯೆ ಪ್ರಕರಣಗಳಲ್ಲಿ ಮೇಲ್ನೋಟಕ್ಕೆ ಸಂಬಂಧ ಇರುವುದು ಪತ್ತೆಯಾಗಿದೆ. ಆದರೆ ಈ ಬಗ್ಗೆ ಸಿಬಿಐನಿಂದಾಗಲಿ ಮತ್ತು ಮೂಲಗಳಿಂದಾಗಲಿ ಯಾವುದೇ
ಮಾಹಿತಿ ಬಂದಿಲ್ಲ. ಆದರೂ ಸಿಐಡಿ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದೆ ಎಂದು ಗೃಹ ಸಚಿವರು ತಿಳಿಸಿದರು. ಸಂಸದ ಪ್ರಹ್ಲಾದ್ ಜೋಷಿ ಹೇಳಿಕೆ ನೀಡಿರುವಂತೆ ಸಿಐಡಿಯಲ್ಲಿ ಯಾವುದೇ ಹಣಕಾಸಿನ ಸಮಸ್ಯೆ ಇಲ್ಲ. ಹಣಕಾಸು ತೊಂದರೆಯಿಂದ ತನಿಖೆ ನಿಂತಿಲ್ಲ. ಈ ಆರೋಪ ಸತ್ಯಕ್ಕೆ ದೂರ. ಸಂಸ್ಥೆಯಲ್ಲಿ ಎಲ್ಲಾ ತನಿಖೆಗಳೂ ನಡೆಯುತ್ತಿವೆ. ಅದೇ ರೀತಿ ಕಲಬುರ್ಗಿ ಹತ್ಯೆ ಪ್ರಕರಣ ಕೂಡ ಚೆನ್ನಾಗಿ ಮತ್ತು ಅತ್ಯಂತ ಎಚ್ಚರಿಕೆಯಿಂದ ನಡೆಯುತ್ತಿದೆ ಎಂದು ಪರಮೇಶ್ವರ್ ವಿವರಿಸಿದರು.