ಜಿಲ್ಲಾ ಸುದ್ದಿ

ಕಾಂಗ್ರೆಸ್ಸೇತರ ಸರ್ಕಾರಕ್ಕೆ ಕಾರಣ ಲಂಕೇಶ್

Manjula VN

ಬೆಂಗಳೂರು: ಲಂಕೇಶರು ಎಂದಿಗೂ ಜಾತಿವಾದಿ, ಭ್ರಷ್ಟಾಚಾರಿಯಾಗಿರದೆ ನೈತಿಕವಾಗಿ ಗಟ್ಟಿಯಾಗಿದ್ದರು. ಆದ್ದರಿಂದಲೇ ಎಲ್ಲರ ವಿರುದ್ಧ ನಿಷ್ಠುರವಾಗಿ ನಡೆದುಕೊಳ್ಳುತ್ತಿದ್ದರು ಎಂದು ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ಹೇಳಿದರು.

ಜನಸಂಸ್ಕೃತಿ, ಅವಿರತ ಪುಸ್ತಕ, ಬೆಂಗಳೂರು ಆರ್ಟ್ ಫೌಂಡೇಷನ್ ಸಂಯುಕ್ತಾಶ್ರಯದಲ್ಲಿ ನಯನ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ `ಈಗ ಇರಬೇಕಿತ್ತು ಲಂಕೇಶ್' ಸಮಾರೋಪದಲ್ಲಿ ಮಾತನಾಡಿದ ಅವರು, ಲಂಕೇಶ್ ಮನಸ್ಸು ಮಾಡಿದ್ದರೆ ಮಂತ್ರಿಯಾಗಬಹುದಿತ್ತು. ರಾಜ್ಯದಲ್ಲಿ ಕಾಂಗ್ರೆಸ್ಸೇತರ ಸರ್ಕಾರ ಬಂದಿದ್ದೆ ಲಂಕೇಶರಿಂದ. ಗೆಲ್ಲುವವರೆಗೆ ತಮ್ಮವರ ಜತೆ ಇರುತ್ತಿದ್ದ ಲಂಕೇಶರು ಗೆದ್ದ ನಂತರ ಯಥಾವತ್ತ ಟೀಕೆ- ಟಿಪ್ಪಣಿ ಮಾಡುತ್ತಿದ್ದರು. ನೋಡುವಾಗ ಒರಟಾಗಿ ಕಂಡರೂ ಹೃದಯದಲ್ಲಿ ಪ್ರೀತಿ ತುಂಬಿದ ತಾಯಿಯಂತಿದ್ದರು ಎಂದರು.

ಅವರನ್ನು ಬ್ರಾಹ್ಮಣ ವಿರೋಧಿ ಅಂತ ಬಿಂಬಿಸಿದರು ಸಹ ಅವರೇ ಬ್ರಾಹ್ಮಣರಿಗೆ ಸಹಾಯ ಮಾಡಿದ ಘಟನೆಗಳು ಎಷ್ಟೋ ಜನರಿಗೆ ಗೊತ್ತಿಲ್ಲ. ಬಡ ವಿದ್ಯಾರ್ಥಿಗೆ ಹಣ ಕಳುಹಿಸುತ್ತಿದ್ದರು. ರಮೇಶ್ ಕುಮಾರ್ ಕೋಲಾರದಲ್ಲಿ ಚುನಾವಣೆಗೆ ನಿಂತಾಗ ಬಡ ಬ್ರಾಹ್ಮಣ ನಿಂತಿದ್ದಾನೆ ಸಹಾಯ ಮಾಡಿ ಬಾ ಎಂದು ತಮ್ಮ ಕೈಯಲ್ಲಿ ಹಣ ಕೊಟ್ಟು ಕಳುಹಿಸುತ್ತಿದ್ದರು. ಬಲಿಷ್ಠ ಜಾತಿಗಳು ಹುಲಿ, ಸಿಂಹಗಳಿದ್ದಂತೆ. ಅವರಿಗೆ ಸಂಘಟನೆ ಬೇಕಿಲ್ಲ. ಸಮಾಜದಲ್ಲಿ ಕಡಿಮೆ ಸಂಖ್ಯೆಯಲ್ಲಿರುವ ಇತರೆ ಜಾತಿಗಳು ಕುರಿಗಳು, ಮೊಲಗಳಿದ್ದಂತೆ. ಅಂತಹವರಿಗೆ ಜಾತಿ ಸಂಘಟನೆ ಬೇಕು. ಮೀಸಲಾತಿ ಇರಬೇಕು ಎನ್ನುತ್ತಿದ್ದರು ಎಂದು ದ್ವಾರಕನಾಥ್ ಸ್ಮರಿಸಿದರು. ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಕೆ.ಎ. ದಯಾನಂದ, ಶ್ರೀನಿವಾಸ್ ಜಿ. ಕಪ್ಪಣ್ಣ ಇದ್ದರು.

SCROLL FOR NEXT