ಜಿಲ್ಲಾ ಸುದ್ದಿ

ಲೋಕಸಭಾ ಕಲಾಪ ಹದಗೆಡಲು ಪ್ರಧಾನಿಯೇ ಕಾರಣ:ಮೊಯ್ಲಿ

Srinivas Rao BV

ಚಿಕ್ಕಬಳ್ಳಾಪುರ: ಲೋಕಸಭಾ ಕಲಾಪಗಳು ವಿಫಲವಾಗಲು ಪ್ರಧಾನಿ ನರೇಂದ್ರ ಮೋದಿ ಅವರೇ ನೇರ ಕಾರಣ ಎಂದು ಸಂಸದ ಎಂ. ವೀರಪ್ಪ ಮೊಯ್ಲಿ ಆರೋಪಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರಿಗೆ ಉತ್ತರಿಸಿದ ಅವರು, ಪ್ರಧಾನಿಯಾಗಿ ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ ಸೌಜನ್ಯಕ್ಕಾದರೂ ಒಮ್ಮೆಯೂ ವಿರೋಧ ಪಕ್ಷಗಳ ಮುಖಂಡರ ಸಭೆ ಕರೆದಿಲ್ಲ ಎಂದು ಕಿಡಿಕಾರಿದರು. ಪ್ರತಿಕ್ಷದ ಮುಖಂಡರ ಜತೆ ಚರ್ಚೆ ನಡೆಸಿ ಜನಪರ ಬಿಲ್‍ಗಳು ಪಾಸ್ ಮಾಡಲು ಸಹಕಾರ ಕೋರುವಲ್ಲಿಯೂ ಪ್ರಧಾನಿ ವಿಫಲರಾಗಿದ್ದು, ವಿರೋಧ ಪಕ್ಷಗಳ ಜತೆ ಸಮನ್ವಯತೆ ಕಾಯ್ದುಕೊಳ್ಳುವ ಬದಲು ಅಂತರ ಕಾಪಾಡಿಕೊಳ್ಳುತ್ತಿರುವ ಕಾರಣ ಕಲಾಪಗಳು ಸುಗುಮವಾಗಿ ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ಅವರು ತಿಳಿಸಿದರು.
ತಮ್ಮದು ಭ್ರಷ್ಟಾಚಾರ ರಹಿತ ಸರ್ಕಾರ ಎಂದು ಹೇಳುವ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ. ಆದರೆ, ಅವರ ಪಕ್ಷದ ಬಿಜೆಪಿ ಸಂಸದ ಕೀರ್ತಿ ಆಜಾದ್ ಭ್ರಷ್ಟಾಚಾರದ ವಿರುದ್ಧ ಮಾತನಾಡಿದ್ದಕ್ಕೆ ಅಮಾನತು ಮಾಡಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.
ಕೋಲಾರ ಚಿಕ್ಕಬಳ್ಳಾಪುರ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗುವ ವಿಧಾನಪರಿಷತ್ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಅನಿಲ್ ಕುಮಾರ್ ಪರ ಉಭಯ ಜಿಲ್ಲೆಗಳ ಎಲ್ಲ ಕಾಂಗ್ರೆಸ್ ಮುಖಂಡರೂ ಒಗ್ಗಟ್ಟಿನಿಂದ ಶ್ರಮಿಸಲಿದ್ದು, ಯಲುವಹಳ್ಳಿ ರಮೇಶ್ ಕೂಡಾ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಒತ್ತಿ ಹೇಳಿದರು. ಕಾಂಗ್ರೆಸ್ ಜನಪರ ಕಾರ್ಯಕ್ರಮಗಳ ಕುರಿತು ಚುನಾಯಿತ ಪ್ರತಿನಿಧಿಗಳಿಗೆ ಅರಿವಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್
ಜಯಭೇರಿ ಭಾರಿಸಲಿದೆ ಎಂದು ಮೊಯ್ಲಿ ವಿಶ್ವಾಸ ವ್ಯಕ್ತಪಡಿಸಿದರು.

SCROLL FOR NEXT