ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಘೋಷ್ ಅನ್ನು ದೇಶದಾದ್ಯಂತ ಸಮಾನತೆ ಸಾರುವುದಕ್ಕಾಗಿ ಆಯೋಜಿಸಿರುವ `ಸ್ವರಾಂಜಲಿ' ಅಖಿಲ ಭಾರತೀಯ ಶೃಂಗ ವಾದ್ಯ ಶಿಬಿರದ ಸಮಾರೋಪ ಸಮಾರಂಭದ ದಿಕ್ಸೂಚಿ ಭಾಷಣವನ್ನು ಸಂಘದ ಸರಸಂಘಚಾಲಕ ಮೋಹನ್ ಭಾಗವತ್ ಮಾಡಲಿದ್ದಾರೆ.
ಬೆಂಗಳೂರು ಹೊರವಲಯ ಯಲಹಂಕದ ರೇವಾ ವಿಶ್ವವಿದ್ಯಾಲಯ ಆವರಣದಲ್ಲಿ ಜ.7ರಿಂದ ಪ್ರಾರಂಭವಾಗುವ ಸ್ವರಾಂಜಲಿ ಶಿಬಿರವನ್ನು ಆರ್‍ಎಸ್‍ಎಸ್ ಪ್ರಚಾರಕ, ಸಂಯೋಜಕ ಕುಟುಂಬ ಪ್ರಬೋಧನ ರಾಮಣ್ಣ ಉದ್ಘಾಟಿಸಲಿದ್ದಾರೆ.
ಅಖಿಲ ಭಾರತೀಯ ಶೃಂಗ ಘೋಷ್ ಶಿಬಿರದ ಸಹಭಾಗಿತ್ವದಲ್ಲಿ ವಿಶೇಷ ಶೃಂಗ ಘೋಷ್ ಸಂಚಲನವನ್ನು ಜ.9 ರಂದು ಸಂಜೆ 4 ಕ್ಕೆ ನಗರದ ಎರಡು ಕಡೆಗಳಲ್ಲಿ ಆಯೋಜಿಸಿದ್ದು, ಮೊದಲನೇ ಸಂಚಲನ ವೈಯಾಲಿ ಕಾವಲ್ ಪೆವಿಲಿಯನ್ ಗ್ರೌಂಡ್‍ನಿಂದ ಮಲ್ಲೇಶ್ವರಂ ಆಟದ ಮೈದಾನದವರೆಗೆ ನಡೆಸಲಾಗುವುದು. ಎರಡನೇ ಸಂಚಲನ ಆರ್.ಟಿ.ನಗರದ ಎಚ್.ಎಂ.ಟಿ. ಮೈದಾನದಿಂದ ಹೊರಟು ವಾಪಸ್ ಅದೇ ಮೈದಾನಕ್ಕೆ ಬಂದು ವಿಲೀನಗೊಳ್ಳಲಿದೆ.
ನೂತನವಾಗಿ ವೇದ ಘೋಷ್‍ನಲ್ಲಿ ಭಾಗವಹಿಸಲಿರುವವರಿಗೆ ತರಬೇತಿ ಶಿಬಿರವಾಗಿರುವ ಕಾರ್ಯಕ್ರಮದಲ್ಲಿ ದೇಶ ವ್ಯಾಪಿ ಎಲ್ಲ ರಾಜ್ಯಗಳಿಂದ ಸುಮಾರು 2000 ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಲಿದ್ದು, ಶಿಬಿರದ ಉದ್ದೇಶ ಬ್ಯಾಂಡ್ ಸೆಟ್ ಗುಣಮಟ್ಟ ಹೆಚ್ಚಿಸಲು ಹೊಸ ಉಪಕರಣ ಮತ್ತು ರಚನಾ (ಸಂಯೋಜನೆಗಳನ್ನು) ತಿಳಿಯುವುದು, ಸ್ವಯಂ ಸೇವಕ ಗುಣಗಳು ಮತ್ತು ಶಾಖೆಗಳು ಬಲಪಡಿಸುವುದಾಗಿದೆ ಎಂದು ಎಂದು ಪ್ರಕಟಣೆ ತಿಳಿಸಿದೆ.