ಬೆಂಗಳೂರು; ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಹಿರಿಯ ಐಎಎಸ್ ಅಧಿಕಾರಿ ಅರವಿಂದ್ ಜಾಧವ್ ನೇಮಕ ಬಹುತೇಕ ಖಚಿತವಾಗಿದೆ. ಈಗಿನ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಅವರ ಮುಂದುವರಿದ ಅವಧಿಯೂ ಡಿ.31ಕ್ಕೆ ಅಂತ್ಯವಾಗುತ್ತಿದ್ದು, ತೆರವಾಗುವ ಸ್ಥಾನಕ್ಕೆ ಸರ್ಕಾರ ಅರವಿಂದ್ ಜಾಧವ್ ಅವರನ್ನು ನೇಮಕ ಮಾಡಲು ನಿರ್ಧರಿಸಿದೆ ಎನ್ನಲಾಗಿದೆ.
ಕರ್ನಾಟಕ ಆಡಳಿತ ಮೇಲ್ಮನವಿ ಪ್ರಾಧಿಕಾರ ಅಧ್ಯಕ್ಷರಾಗಿರುವ ಅರವಿಂದ್ ಜಾಧವ್ ಅವರನ್ನು ನೇಮಕ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಿದ್ದು, ಬುಧವಾರ ಅಧಿಕೃತ ಆದೇಶ ಪ್ರಕಟವಾಗಲಿದೆ. 1978 ಬ್ಯಾಚ್ ನ ಅರವಿಂದ್ ಜಾಧವ್ ಉತ್ತರ ಪ್ರದೇಶ ಮೂಲದವರಾ-ಗಿದ್ದು, ಸದ್ಯ ಇರುವ ಐಎಎಸ್ ಅಧಿಕಾರಿಗಳ ಪೈಕಿ ಸೇವಾ ಹಿರಿತನ ಹೊಂದಿದ್ದಾರೆ.
ಅವರು ಮುಂದಿನ 6 ತಿಂಗಳ ಅವಧಿಯಲ್ಲಿ ನಿವೃತ್ತಿಯಾಗುತ್ತಿರುವುದರಿಂದ ಅವರಿಗೆ ಅವಕಾಶ ಕಲ್ಪಿಸುವುದು ಸೂಕ್ತ ಎಂದು ಸಿಎಂ ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ. ಈ ಹುದ್ದೆಗೆ ಕಳೆದೊಂದು ವಾರದಿಂದ ಹಿರಿಯ ಐಎಎಸ್ ಅಧಿಕಾರಿಗಳಲ್ಲೇ ತೀವ್ರ ಪೈಪೋಟಿ ನಡೆದು 1981ರ ಬ್ಯಾಚ್‍ನ ಐಎಎಸ್ ಅಧಿಕಾರಿ ಕೆ. ರತ್ನಪ್ರಭ ಮತ್ತು 1982ರ ಬ್ಯಾಚ್‍ನ ಕೆ.ಪಟ್ಟನಾಯಕ್ ನಡುವೆ ತೀರಾ ಸ್ಪರ್ಧೆ ಏರ್ಪಟ್ಟಂತೆ ಸರ್ಕಾರದ ಮೇಲೆ ಒತ್ತಡವಿತ್ತು. ಈ ಮಧ್ಯೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ.ಉಮೇಶ್ (1981) ಅವರಿಗೆ ಅವಕಾಶ ಕಲ್ಪಿಸಬೇಕೆಂಬ ಒತ್ತಡವೂ ತೀವ್ರವಾಗಿತ್ತು.