ಜಿಲ್ಲಾ ಸುದ್ದಿ

ಮುಗಿಯದ ನಾಡಗೀತೆ ವಿವಾದ: ಬರಗೂರು ರಾಮಚಂದ್ರಪ್ಪ ವಿಷಾದ

Srinivas Rao BV

ಬೆಂಗಳೂರು: 2005ರಲ್ಲಿ ಶುರುವಾದ ನಾಡಗೀತೆ ವಿವಾದ 10 ವರ್ಷಗಳಾದರೂ ಮುಗಿಯದೆ ವಿಷಾದಗೀತೆಯಾಗುತ್ತಿದೆಯೇ  ಎಂಬ ಅನುಮಾನ ಉಂಟಾಗುತ್ತಿದೆ
ಎಂದು ನಾಡೋಜ ಬರಗೂರು ರಾಮಚಂದ್ರಪ್ಪ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಂಗಳವಾರ ಕುವೆಂಪು ಅವರ ನೆನಪಿನಂಗಳದಲ್ಲಿ `ಕನ್ನಡ ಚಿಂತನೆ: ಮಾತೃ ಭಾಷಾ ಶಿಕ್ಷಣ ನೀತಿ' ಕುರಿತು
ಮಾತನಾಡಿದ ಅವರು, ಕುವೆಂಪು ಅವರು 1930ರಲ್ಲಿ ನಾಡಗೀತೆ ರಚಿಸಿದ ಸಂದರ್ಭದಲ್ಲಿ ಕರ್ನಾಟಕ ಎಂಬ ಹೆಸರೇ ಬಂದಿರಲಿಲ್ಲ. ನಾಡಗೀತೆ ಯನ್ನಾಗಿ ಮಾಡುತ್ತಾರೆ ಎಂಬ ಕಲ್ಪನೆಯೂ ಅವರಲ್ಲಿರಲಿಲ್ಲ. ಇಂದು ಭಿನ್ನಾಭಿಪ್ರಾಯಗಳು ಕಂಡುಬರುತ್ತಿದ್ದು, ವಿವಾದ ಮುಂದುವರಿ ಯಲು ಬಿಡಬಾರದು ಎಂದು ಸಲಹೆ ನೀಡಿದರು.
ವೈಜ್ಞಾನಿಕ ಮನೋಧರ್ಮಕ್ಕೆ ಆಧ್ಯಾತ್ಮ ಬಹಳ ಹತ್ತಿರವಾಗಿದೆ. ವೈಜ್ಞಾನಿಕ ಮತ್ತು ಆಧ್ಯಾತ್ಮದ ಮೂಲಕ ಸಾಮಾಜಿಕ ಚಿಂತನೆಗಳನ್ನು ಒಳಗೊಂಡಿದ್ದ ಕುವೆಂಪು ಧೀಮಂತ ವ್ಯಕ್ತಿ ಎನಿಸಿದರು. ಪ್ರಸ್ತುತ ದೇವರ ಹೆಸರಿನಲ್ಲಿ ನಡೆಯುತ್ತಿರುವ ಶೋಷಣೆ ನಿಲ್ಲಬೇಕಿದೆ ಎಂದು ಬರಗೂರು ಹೇಳಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಪ್ರಾದೇಶಿಕ ಭಾಷೆಗಳನ್ನು ಉಳಿಸಲು ಎಲ್ಲ ಮುಖ್ಯಮಂತ್ರಿಗಳು
ಒಗ್ಗೂಡಿ ಸಭೆ ನಡೆಸಬೇಕಿದೆ. ಇದಕ್ಕೆ ಚಿಂತಕರು, ಶಿಕ್ಷಣ ತಜ್ಞರು ಬೆಂಬಲ ನೀಡಬೇಕು. ಪ್ರಾದೇಶಿಕ ಅಳಿವು ಉಳಿವಿನ ನಡುವೆ ಶಿಕ್ಷಣ ನೀತಿ ರೂಪಿಸುವ ಅನಿವಾರ್ಯ ಪರಿಸ್ಥಿತಿ ಇದೆ ಎಂದು ತಿಳಿಸಿದರು.
ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ ಮಾತನಾಡಿ ಶಿಕ್ಷಣ ಹಕ್ಕು ಕಾಯ್ದೆಯಡಿ ಮಾತೃಭಾಷೆಯಲ್ಲಿ ಶಿಕ್ಷಣ ನೀಡಲು ಅವಕಾಶವಿದ್ದರೂ ಅದನ್ನು ಅನುಷ್ಠಾನಕ್ಕೆ ತರುವಲ್ಲಿ ಸರ್ಕಾರ ವಿಫಲವಾಗಿದೆ. ಇದು ಭಾಷಾ ಮಾಧ್ಯಮಕ್ಕೆ ದೊಡ್ಡ ಕಂಟಕವಾಗಿ ಪರಿಣಮಿಸಿದೆ ಎಂದರು.

SCROLL FOR NEXT