ಬೆಂಗಳೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ ಹೋಟೆಲ್ ಗಳು, ಕ್ಲಬ್, ರೆಸಾರ್ಟ್, ಪಾರ್ಟಿ ಹಾಲ್ ಮತ್ತು ಮಾಲ್‍ಗಳಲ್ಲಿ ದಿನನಿತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ತ್ಯಾಜ್ಯ ಉತ್ಪಾದನೆಯಾಗುವುದರಿಂದ ಅದನ್ನು ಹಸಿ ಮತ್ತು ಒಣ ಕಸವನ್ನಾಗಿ ವಿಂಗಡಿಸಿ, ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು ಎಂದು ಬಿಬಿಎಂಪಿ ಕೋರಿದೆ.
ನಿಯಮ ಉಲ್ಲಂಘಿಸುವ ನಾಗರಿಕರಿಗೆ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆ-1976 ಸೆಕ್ಷನ್ 431(ಆ) ಪ್ರಕಾರ ದಂಡ ವಿಧಿಸಲು ಕೋರ್ಟ್ ಆದೇಶಿಸಿದ್ದು, ಆದರ ಅಡಿಯಲ್ಲಿ ಕನಿಷ್ಠ 100 ರೂಪಾಯಿಯಿಂದ ಗರಿಷ್ಠ 5 ಸಾವಿರ ರೂ.ವರೆಗೆ ದಂಡ ವಿಧಿಸಲಾಗುವುದು ಎಂದು ಮಹಾಪೌರ ಬಿ.ಎನ್.ಮಂಜುನಾಥ ರೆಡ್ಡಿ ಎಚ್ಚರಿಸಿದ್ದಾರೆ. 198 ವಾರ್ಡ್‍ನಲ್ಲಿ ಒಣ ಕಸ ವಿಂಗಡಣೆ ಘಟಕಗಳನ್ನು ಸ್ಥಾಪಿಸಲಾಗಿದೆ. ಒಣಕಸವನ್ನು ಸಂಗ್ರಹಿಸಿ ವಿಂಗಡಣೆ ಮಾಡಿ ಪುನರ್ ಬಳಕೆ ಮಾಡಲಾಗುತ್ತಿದೆ. ಪೌರಕಾರ್ಮಿಕರು ಪ್ರತಿನಿತ್ಯ ಮನೆ ಮನೆಗೆ ಹೋಗಿ ವಿಂಗಡಿಸಿದ ಕಸವನ್ನು ತಳ್ಳುಗಾಡಿ ಮುಖಾಂತರ ಸಂಗ್ರಹಿಸುತ್ತಿದ್ದಾರೆ.
ನಗರದಲ್ಲಿ ಉತ್ಪತ್ತಿಯಾದ ಕಸವನ್ನು ಸಂಪೂರ್ಣವಾಗಿ ವೈಜ್ಞಾನಿಕ ವಿಲೇ ವಾರಿ ಮಾಡುವ ಕ್ಷಮತೆ ಪಾಲಿಕೆ ಹೊಂದಿದೆ. ಆದ್ದರಿಂದ ಸಾರ್ವಜನಿಕರು ಪ್ರತಿನಿತ್ಯ ತಪ್ಪದೇ ಮನೆಯಲ್ಲಿಯೇ ಕಸವನ್ನು ವಿಂಗಡಿಸಿ ಪೌರಕಾರ್ಮಿಕರಿಗೆ ನೀಡಬೇ ಕು. ತ್ಯಾಜ್ಯಗಳನ್ನು ಪಾದಚಾರಿ ಮಾರ್ಗದ ಮೇಲೆ ಹಾಕಬಾರದು. ನಗರದ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡುವುದು ಎಲ್ಲಾ ನಾಗರಿಕರ ಕರ್ತವ್ಯ ಎಂದು ಮನವಿ ಮಾಡಿದ್ದಾರೆ.
ಹೊಸ ವರ್ಷದ ಆರಂಭದ ದಿನವನ್ನು ಸಡಗರ ಮತ್ತು ಸಂತೋಷದಿಂದ ಆಚರಿಸುವ ಜೊತೆಗೆ ನಗರದ ನಾಗರಿಕರು ಮತ್ತು ಹೋಟೆಲ್, ಕ್ಲಬ್ ಮತ್ತು ಪಾರ್ಟಿ ಹಾಲ್ ಮಾಲೀಕರು ತಮ್ಮ ಜವಾಬ್ದಾರಿಯನ್ನು ಅರಿತು ಕಸ ವಿಲೇವಾರಿಗಾಗಿ ಪೂರ್ವಭಾವಿ ಸಿದ್ಧತೆ ಮಾಡಿಕೊಂಡು ಸರಿಯಾಗಿ ಮಾಡಬೇಕು. ಸೂಕ್ತ ರೀತಿಯಲ್ಲಿ ಕಸ ವಿಲೇವಾರಿ ಮಾಡದೇ ರಸ್ತೆ ಬದಿ, ಖಾಲಿ ನಿವೇಶನಗಳಲ್ಲಿ ಹಾಕಿರುವುದು ಕಂಡುಬಂದಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ.