ಬೆಂಗಳೂರು: 2016 ರ ಅಂತ್ಯದೊಳಗೆ ಬೆಂಗಳೂರಿನ ತಾಪಮಾನವನ್ನು 2 ಡಿಗ್ರಿಯಷ್ಟು ಕಡಿಮೆ ಮಾಡುವ ಗುರಿ ಹೊಂದಿರುವುದಾಗಿ ಕೇಂದ್ರ ರಸಗೊಬ್ಬರ ಸಚಿವ ಅನಂತ್ ಕುಮಾರ್ ತಿಳಿಸಿದ್ದಾರೆ.
ಬಸವನಗುಡಿಯ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅದಮ್ಯ ಚೇತನ ಸೇವಾ ಉತ್ಸವ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, 60 ವರ್ಷಗಳ ಹಿಂದೆ ಒಬ್ಬ ಮನುಷ್ಯನಿಗೆ 500 ಮರಗಳಿದ್ದವು. ಹಾಗೆಯೇ 30ವರ್ಷಗಳ ಹಿಂದೆ ಒಬ್ಬನಿಗೆ ಒಂದು ಮರವಾದರೂ ಇತ್ತು. ಆದರೆ, ಈಗ ಏಳು ಜನಕ್ಕೆ ಒಂದು ಮರವಿದೆ. ಹೀಗಾದರೇ ಒಂದು ದಿನ ಕೃತಕ ಆಮ್ಲಜನಕವನ್ನು ಕೊಂಡುಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು. ಅದಮ್ಯ ಚೇತನ ಸಂಸ್ಥೆ ಪ್ರತಿ ವರ್ಷ ಅನ್ನ, ಅಕ್ಷರ, ಆರೋಗ್ಯಕ್ಕೆ ಮಹತ್ವ ಕೊಡುವುದರ ಜತೆಗೆ ಈ ವರ್ಷ ಹಸಿರನ್ನು ಉಳಿಸುವುದು ಧ್ಯೇಯವಾಗಿದೆ. ಕಾರ್ಯಕ್ರಮಕ್ಕೆ ಬಂದ ಪ್ರತಿಯೊಬ್ಬರೂ ಒಂದೊಂದು ಸಸಿಯನ್ನು ನೆಡಬೇಕು ನಾವೇ ಸಸಿಗಳನ್ನು ನೀಡುತ್ತಿದ್ದೇವೆ. 2016ರ ಅಂತ್ಯದೊಳಗೆ 1ಕೋಟಿ ಮರಗಳನ್ನು ನೆಡುವ ಗುರಿ ಹೊಂದಿರುವುದಾಗಿ ತಿಳಿಸಿದರು.
ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಮಾತನಾಡಿ, ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ಮೊದಲ ಬಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತು ಮತಹಾಕಲು ಅವಕಾಶ ಮÁಡಿಕೊಡಲಾಯಿತು. ಹಾಗೆಯೇ ಪ್ರತಿ ನಿತ್ಯವೂ ಕೂಡ ಜಗತ್ತು ಬದಲಾಗುತ್ತಾ ಹೋಗುತ್ತದೆ. ಮಹಿಳೆಯರಿಗೆ ಅವಕಾಶ ಕೊಟ್ಟು ನೋಡಬೇಕು ಆಗ ಅವರ ಅಚ್ಚುಕಟ್ಟಾದ ನಿಯತ್ತಿನ ಕೆಲಸ ಗೋಚರಿಸುತ್ತದೆ ಎಂದರು. ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಸ್ಮರಣಾರ್ಥ `ಕಲಾ ಸಲಾಂ' ಪ್ರದರ್ಶನ ನಡೆಯಿತು. ಅದರಲ್ಲಿ ರ್ಯಾಡರ್, ಯುದ್ಧ ವಿಮಾನ, ವೇದಕಾಲದಿಂದ ನಮ್ಮ ಹಸಿರು ಸಂಪತ್ತು ಹೇಗೆ ಬೆಳೆಯಿತು ಎನ್ನುವುದರ ಬಗ್ಗೆ ಹಸಿರು ಭಾರತ ಪ್ರದರ್ಶನ ನಡೆಯಿತು. ಹಿರಿಯ ವಿಜ್ಞಾನಿ ಡಾ. ಕೆ ತಮಿಳುಮಣಿ, ಪರಿಸರತಜ್ಞ ಯಲ್ಲಪ್ಪರೆಡ್ಡಿ, ಅದಮ್ಯ ಚೇತನದ ತೇಜಸ್ವಿನಿ ಅನಂತ್ ಕುಮಾರ್, ಶಾಸಕ ಗೋವಿಂದ ಕಾರಜೋಳ, ಆರ್. ಅಶೋಕ್, ವಿಜಯಕುಮಾರ್, ರವಿಸುಬ್ರಹ್ಮಣ್ಯ ಹಾಜರಿದ್ದರು.