ಬೆಂಗಳೂರು: ಇಸ್ಲಾಂ ಧರ್ಮ ಪ್ರಚಾರಕ ಝಾಕೀರ್ ನಾಯ್ಕ್ ಗೆ ಮಂಗಳೂರು ನಗರ ಪ್ರವೇಶಕ್ಕೆ ನಿರ್ಬಂಧ ಹೇರಿ ಆದೇಶ ಹೊರಡಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್‍ಗೆ ಸ್ಪಷ್ಟಪಡಿಸಿದೆ.
ಮಂಗಳೂರು ನಗರ ಪ್ರವೇಶಿಸದಂತೆ ಝಾಕೀರ್ ನಾಯ್ಕ್ ಗೆ ನಿರ್ಬಂಧ ವಿಧಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸುವಂತೆ ಕೋರಿ ವಕೀಲ ಎನ್.ಪಿ.ಅಮೃತೇಶ್ ಸೇರಿದಂತೆ 21 ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ರಾಜ್ಯ ಅಡ್ವೋಕೇಟ್ ಜನರಲ್ ಮಧುಸೂದನ್ ನಾಯಕ್ ಕೋರ್ಟ್‍ಗೆ ಆದೇಶ ಪ್ರತಿ ನ್ಯಾಯಪೀಠಕ್ಕೆ ಸಲ್ಲಿಸಿದರು. ಜಾಕೀರ್ ನಾಯ್ಕ್ ಡಿ.31ರಿಂದ ಏಳು ದಿನಗಳ ಕಾಲ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿ ಪ್ರವೇಶಿಸಬಾರದು ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಡಿ.26ರಂದು ಆದೇಶ ಹೊರಡಿಸಿದ್ದಾರೆ ಎಂದು ಅಡ್ವೋಕೇಟ್ ಜನರಲ್ ಜ್ಞಾಪನಾ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು.
ಜ್ಞಾಪನಾ ಪತ್ರವನ್ನು ಪುರಸ್ಕರಿಸಿದ ನ್ಯಾ. ಆನಂದ ಬೈರಾರೆಡ್ಡಿ ಮತ್ತು ನ್ಯಾ.ಬಿ.ವೀರಪ್ಪ ಅವರಿದ್ದ ರಜಾಕಾಲದ ವಿಭಾಗೀಯ ಪೀಠ, ಅರ್ಜಿದಾರರ ಮನವಿ ಈಡೇರಿದ ಕಾರಣ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿತು.