ಬೆಂಗಳೂರು: ಸಾರ್ವಜನಿಕರ ರಕ್ಷಣೆ ನಿಟ್ಟಿನಲ್ಲಿ ಗೃಹರಕ್ಷಕ ದಳಗಳು ಕೇವಲ ಕರ್ನಾಟಕ ರಾಜ್ಯಕ್ಕೆ ಸೀಮಿತವಾಗಿರಬಾರದು ಎಂದು ರಾಜ್ಯಪಾಲ ವಿ.ಆರ್.ವಾಲಾ ಹೇಳಿದ್ದಾರೆ.
ಶುಕ್ರವಾರ ಕಂಠೀರವ ಕ್ರೀಡಾಂಗಣದಲ್ಲಿ ಗೃಹರಕ್ಷಕ ದಳ, ಪೌರರಕ್ಷಣೆ, ಅಗ್ನಿಶಾಮಕ ಸೇವೆ ಮತ್ತು ತುರ್ತು ಸೇವೆಗಳ ನಿರ್ದೇಶನಾಲಯ ಆಯೋಜಿಸಿದ್ದ ರಾಷ್ಟ್ರೀಯ ವಿಪತ್ತು ತಡೆ ದಿನಾಚರಣೆ ಮತ್ತು ರ್ಯಾಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತುರ್ತು ಸೇವಾ ಯೋಜನೆಗಳು ಕೇವಲ ರಾಜ್ಯಕ್ಕೆ ಸೀಮಿತವಾಗಬಾರದು. ದೇಶದ ಯಾವುದೇ ಮೂಲೆಯಲ್ಲಿ ಅವಘಡ ಸಂಭವಿಸಿದರೆ ನಾಗರಿಕರ ಸೇವೆ ಸಿದ್ಧರಬೇಕು.
ಅವಘಡಗಳಲ್ಲಿ ಸಾರ್ವಜನಿಕರನ್ನು ರಕ್ಷಿಸುವಂತಹ ಮಹತ್ ಕಾರ್ಯಕ್ಕೆ ಯುವ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದರು.
ರಾಜ್ಯದ ಪೌರರಕ್ಷಣ ದಳಕ್ಕೆ ದೇಶದಲ್ಲಿ ಪ್ರಥಮ ಸ್ಥಾನ ಲಬಿsಸಿರುವುದು ರಾಜ್ಯಕ್ಕೆ ಹೆಮ್ಮೆಯ ಸಂಗತಿ. ಯುವ ಜನಾಂಗ ಸಾರ್ವಜನಿಕರನ್ನು ರಕ್ಷಿಸುವ ಕಾರ್ಯದಲ್ಲಿ ಹೆಚ್ಚು ತೊಡಗಿಕೊಳ್ಳಬೇಕು. ಜನರ ಕಷ್ಟಕ್ಕೆ ಆಸರೆಯಾಗಬೇಕು. ಯಾವುದೇ ಸಂದರ್ಭದಲ್ಲಿ ಧೃತಿಗೆಡದೆ ಸಾರ್ವಜಕನಿಕರ ಆಸ್ತಿಪಾಸ್ತಿ, ಜೀವ ರಕ್ಷಣೆಗೆ ಮುಂದಾಗಬೇಕು
ಎಂದರು.
ಕಾರ್ಯಕ್ರಮದ ಬಳಿಕ ಅಗ್ನಿಶಾಮಕ ಹಾಗೂ ತುರ್ತು ಸೇವಾ ಘಟಕಗಳು ಬಾಂಬ್ ಸ್ಪೋಟದಂತಹ ಅವಘಡ ಸಂಭವಿಸಿದಾಗ ಉಂಟಾಗುವ ಸನ್ನಿವೇಶಗಳ ಬಗ್ಗೆ ಅಣಕು ಪ್ರದರ್ಶನ ನಡೆಸಿದರು. ಅಗ್ನಿಶಾಮಕ ದಳದ ವಾಹನಗಳ ಪರಿಚಯ, ಬೆಂಕಿ ನಂದಿಸುವ ವಿಧಾನ, ಯಂತ್ರೋಪಕರಣಗಳ ಬಗ್ಗೆ ಮಾಹಿತಿಗಳನ್ನು ಪ್ರದರ್ಶನ ಮೂಲಕ ತೋರಿಸಲಾಯಿತು. ಅಗ್ನಿಶಾಮಕ ದಳದಲ್ಲಿ ಬಳಸುವ ವಸ್ತುಗಳ ಕುರಿತು ವಸ್ತುಪ್ರದರ್ಶನ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಗೃಹರಕ್ಷಕ ದಳ, ಸಿಆರ್ ಪಿಎಫ್, ಅಗ್ನಿಶಾಮಕ ಮತ್ತು ತುರ್ತುಸೇವೆಗಳು, ಪೌರರಕ್ಷಣ ದಳ, ಪೊಲೀಸ್ ಹಾಗೂ ಎನ್‍ಸಿಸಿ ಕೆಡೆಟ್‍ಗಳು ಭಾಗವಹಿಸಿದ್ದರು. ಗೃಹಸಚಿವ ಕೆ.ಜೆ. ಜಾರ್ಜ್, ಪೊಲೀಸ್ ಮಹಾ ನಿರ್ದೇಶಕ ಲಾಲ್ ರುಖುಂ ಪಚಾವೋ ಉಪಸ್ಥಿತರಿದ್ದರು.