ಬೆಂಗಳೂರು: ಶಿಕ್ಷಣ ಸಂಸ್ಥೆಗಳಲ್ಲಿ ಪದವಿ ಪಡೆಯುವುದಕ್ಕಿಂತ ಅನುಭವದ ಮೂಲಕ ಕಲಿಯುವ ವಿದ್ಯೆ ಶ್ರೇಷ್ಠವಾದುದು ಎಂದು ಚಿತ್ರಕಲಾ ಪರಿಷತ್ತಿನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಅಭಿಪ್ರಾಯಪಟ್ಟರು.
ವೆಂಕಟಪ್ಪ ಚಿತ್ರಕಲಾ ಶಾಲೆಯಲ್ಲಿ ಕಲಾವಿದೆ ವಿನಯ ಸುವರ್ಣ ಅವರ ಚಿತ್ರಕಲಾ ಪ್ರದರ್ಶನಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಚಿತ್ರಕಲೆ, ಸಂಗೀತ, ಸಾಹಿತ್ಯ ಸೇರಿದಂತೆ ಕಲೆಗಳು ಅನುಭವದ ಮೂಲಕ ಒಲಿಯುತ್ತದೆ.
ಶಿಕ್ಷಣ ಸಂಸ್ಥೆಗಳಲ್ಲಿ ಕಲಿತು ಪಡೆದ ಕಲೆಯ ಶಿಕ್ಷಣಕ್ಕಿಂತಲೂ ಸ್ವಂತ ಅನುಭವದ ಮೂಲಕ ಕಲಿಯುವ ಪ್ರಕ್ರಿಯೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ತಪಸ್ಸಿನ ಮಾದರಿಯಲ್ಲಿ ಶ್ರಮಪಟ್ಟರೆ ಮಾತ್ರ ಕಲೆಯಲ್ಲಿ ಪರಿಪೂರ್ಣತೆ ಸಾಧಿಸಬಹುದು. ಅನುಭವದ ಕಲಿಕೆಯಲ್ಲಿ ಮುಂಚೂಣಿಗೆ ಬರುವವರು ವಿನಯಶೀಲ ಹಾಗೂ ಪ್ರಾಮಾಣಿಕರಾಗಿರುತ್ತಾರೆ ಎಂದರು.
ಶೇಷಾದ್ರಿಪುರ ಕಾಲೇಜು ದತ್ತಿಯ ಗೌರವ ಕಾರ್ಯದರ್ಶಿ ವೂಡೆ ಪಿ.ಕೃಷ್ಣ, ಕೃಷ್ಣಪ್ಪ ಸುವರ್ಣ ಹಾಜರಿದ್ದರು.